ಭಾರತ ಆರ್ಥಿಕತೆ ಮುಳುಗಿಸುವ ಕಾಂಗ್ರೆಸ್ ನ ‘ಗ್ಯಾರಂಟಿ’: ಪ್ರಧಾನಿ ಮೋದಿ ಟೀಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದ್ದು, ಭಾರತದ ಆರ್ಥಿಕತೆ ಮುಳುಗಿಸುವ ಖಾತರಿಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆಲೋಕಸಭೆಯಲ್ಲಿ ಗುರುವಾರ ಉತ್ತರಿಸಿ ಮಾತನಾಡಿದ ಅವರು, ಭ್ರಷ್ಟಾಚಾರ, ನಿರುದ್ಯೋಗ, ತುಷ್ಟಿಕರಣ, ಭಯೋತ್ಪಾದನೆಯ ಗ್ಯಾರಂಟಿಯನ್ನು ಕಾಂಗ್ರೆಸ್​ನವರು ನೀಡುತ್ತಿದ್ದಾರೆ. ಇವರು ಯಾವತ್ತಿಗೂ ಭಾರತವನ್ನು ಮೂರನೇ ಬಲಿಷ್ಠ ಆರ್ಥಿಕತೆ ಮಾಡುವ ಗ್ಯಾರಂಟಿ ನೀಡುವುದಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು. ಆ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮೋದಿ ಪರೋಕ್ಷವಾಗಿ ಪ್ರಸ್ತಾಪಿಸಿದರು.

ಮಣಿಪುರದ ಘಟನೆ ಬಗ್ಗೆ ಬುಧವಾರ ಗೃಹ ಸಚಿವ ಅಮಿತ್ ಶಾ ವಿಸ್ತಾರವಾಗಿ ಎಲ್ಲವನ್ನೂ ಹೇಳಿದ್ದಾರೆ. ಅಮಿತ್ ಶಾ ಮಾತಿನ ಬಳಿಕ ವಿಪಕ್ಷಗಳು ಎಷ್ಟು ಸುಳ್ಳು ಹೇಳಿವೆ ಎಂಬುದು ಬಯಲಾಗಿದೆ. ಮಣಿಪುರದಲ್ಲಿ ಹಿಂಸಾಚಾರ ಶುರುವಾದಗಿನಿಂದ ಬಹಳಷ್ಟು ಜನರು ತಮ್ಮವರನ್ನು ಕಳೆದುಕೊಂಡಿದ್ದಾರೆ. ಮಹಿಳೆಯರ ಜೊತೆಗೆ ಕೆಟ್ಟದಾಗಿ ನಡೆದುಕೊಳ್ಳಲಾಗಿದೆ. ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸ ಸರ್ಕಾರ ಮಾಡಲಿದೆ. ಶಾಂತಿ ಮರುಕಳಿಸಲಿದೆ ಎಂದು ಪ್ರಧಾನಿ ಹೇಳಿದರು.

ದೇಶ ನಿಮ್ಮ ಜೊತೆಗೆ ಇದೆ, ಸದನ ನಿಮ್ಮ ಜೊತೆಗಿದೆ. ಎಲ್ಲರೂ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೊಣ ಎಂದು ಮಣಿಪುರ ಜನರಲ್ಲಿ ಮೋದಿ ಮನವಿ ಮಾಡಿದರು. ಮಣಿಪುರ ವಿಚಾರದಲ್ಲಿ ವಿಪಕ್ಷಗಳು ರಾಜಕೀಯ ಮಾಡುತ್ತಿವೆ. ಮಣಿಪುರದ ಬಗ್ಗೆ ಚರ್ಚಿಸಲು ವಿಪಕ್ಷ ನಾಯಕರಿಗೆ ಆಸಕ್ತಿ ಇಲ್ಲ. ಇಡೀ ದೇಶ ಮಣಿಪುರದ ಮಹಿಳೆಯರು, ಹೆಣ್ಮಕ್ಕಳ ಜೊತೆ ಇದೆ. ಭಾರತಕ್ಕೆ ಸೇರಿದ ದ್ವೀಪ ಪ್ರದೇಶವನ್ನು ಶ್ರೀಲಂಕಾಗೆ ನೀಡಲಾಗಿದೆ. ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಶ್ರೀಲಂಕಾಗೆ ನೀಡಲಾಗಿತ್ತು. ಮಣಿಪುರದಲ್ಲಿ ಹಿಂಸಾಚಾರ ನಡೆಸಿದವರ ವಿರುದ್ಧ ಕ್ರಮ ಖಚಿತ ಎಂದು ಮೋದಿ ಹೇಳಿದರು.

ಪ್ರಜಾಪ್ರಭುತ್ವ, ಸಂವಿಧಾನ ಹತ್ಯೆ ಬಗ್ಗೆ ಮಾತನಾಡುವ ಜನರು ಇಂದು ಭಾರತ ಮಾತೆಯ ಹತ್ಯೆಯ ಬಗ್ಗೆ ಮಾತನಾಡುತ್ತಿದ್ದಾರೆ. ಅಗಸ್ಟ್ 14 ದೇಶ ವಿಭಜನೆಯ ದಿನ. ಭಾರತ‌ಮಾತೆಯನ್ನು ಮೂರು ಭಾಗಗಳಾಗಿ ಒಡೆದವರು ಇವರೇ ಎಂದು ಮೋದಿ ಕಿಡಿಕಾರಿದರು.

ಜೀವನದ ಕಣಕಣವನ್ನೂ ದೇಶಕ್ಕಾಗಿ ಮೀಸಲಿಟ್ಟಿದ್ದೇನೆ
ನನ್ನ ಜೀವನದ ಪ್ರತಿ ಕಣಕಣವನ್ನೂ ದೇಶಕ್ಕಾಗಿ ಮೀಸಲಿಟ್ಟಿದ್ದೇನೆ. ದೇಶದ ಜನರ ಅಭಿವೃದ್ಧಿಗಾಗಿಯೇ ನಾವು ಇರೋದು. ಇದು ನಮ್ಮ ಜವಾಬ್ದಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!