Monday, December 11, 2023

Latest Posts

ವನ್ಯ ಪ್ರಾಣಿಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ವರದಿ,ಮೈಸೂರು:

ಅರಣ್ಯ ಪ್ರದೇಶ ಹಾಗೂ ವನ್ಯ ಪ್ರಾಣಿಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು

ಶನಿವಾರ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ೬೯ ನೇ ವನ್ಯ ಜೀವಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯ ಉಳಿದರೆ ನಾಡು, ಜನ ಉಳಿಯಲು ಸಾಧ್ಯ. ಪ್ರಕೃತಿ ಸಮತೋಲನಕ್ಕೆ ಅರಣ್ಯ ಶೇಕಡಾ ೩೩ ರಷ್ಟು ಇರಬೇಕು. ಆದರೆ ಶೇಕಡಾ ೨೨ ರಷ್ಟು ಇದೆ. ಮನುಷ್ಯನ ದುರಾಸೆಯಿಂದ ಕಾಡು ಕಡಿಮೆ ಆಗುತ್ತಿದೆ. ಇದರಿಂದ ವನ್ಯ ಜೀವಿಗಳಿಗೆ ತೊಂದರೆ ಆಗಿ ನಾಡಿಗೆ ಬರುತ್ತವೆ.

ಮಾನವ ಹಾಗೂ ಪ್ರಾಣಿ ಸಂಘರ್ಷ ತಡೆಗಟ್ಟಲು ಇಲ್ಲಿಯವರೆಗೆ ೩೧೨ ಕಿಮೀ ರೈಲ್ವೆ ಬ್ಯಾರಿಕೇಡ್ ಮಾಡಲಾಗಿದೆ. ಪ್ರಾಣಿಗಳು ಆಹಾರ ಮತ್ತು ಕುಡಿಯುವ ನೀರನ್ನು ಅರಸಿ ನಾಡಿಗೆ ಬರುತ್ತವೆ. ಆದ್ದರಿಂದ ಅರಣ್ಯ ಪ್ರದೇಶದಲ್ಲಿಯೇ ನೀರು ಮತ್ತು ಆಹಾರ ಸಿಗುವಂತೆ ಮಾಡಿದರೆ ಪ್ರಾಣಿಗಳು ನಾಡಿಗೆ ಬರುವುದಿಲ್ಲ. ಇದಕ್ಕೆ ಅಗತ್ಯವಾದ ಎಲ್ಲಾ ಸಹಕಾರವನ್ನು ಸರ್ಕಾರ ನೀಡುತ್ತದೆ ಎಂದರು.

ಅರಣ್ಯ ಪ್ರದೇಶ ವನ್ನು ಹೆಚ್ಚಳ ಮಾಡಲು ಅರಣ್ಯ ಇಲಾಖೆ ಕ್ರಮಗಳನ್ನು ಕೈಗೊಳ್ಳಬೇಕು. ಪಶ್ಚಿಮ ಘಟ್ಟ ಪ್ರದೇಶ ತುಂಬಾ ಹಳೆಯದಾದ ಜೀವ ವೈವಿಧ್ಯತೆ ಪ್ರದೇಶ. ಇಲ್ಲಿ ಎಲ್ಲಾ ರೀತಿಯ ಸಸ್ಯ ಹಾಗೂ ಪ್ರಾಣಿಗಳು ಇವೆ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಅರಣ್ಯ ಪ್ರದೇಶದ ಬಗ್ಗೆ ಅಭಿಮಾನ ಇರಬೇಕು. ಅರಣ್ಯ ಪ್ರದೇಶದ ಅಂಚಿನಲ್ಲಿ ವಾಸಿಸುವ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.

ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವರಾದ ಈಶ್ವರ್ ಬಿ ಖಂಡ್ರೆ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿರತೆ ಕಾರ್ಯಾಚರಣೆಗೆ ಅಗತ್ಯವಾದ ವನ್ಯ ಜೀವಿ ಆಂಬುಲೆನ್ಸ್ ವೀಕ್ಷಣೆ ಮಾಡಿದರು. ಬುಡಕಟ್ಟು ಜನಾಂಗದವರು ಕರಕುಶಲ ಕಲೆಯಿಂದ ಸ್ಥಳದಲ್ಲೇ ತಯಾರಿಸುವ ವಸ್ತುಗಳನ್ನು ಸ್ಟಾಲ್ ಗಳಲ್ಲಿ ವೀಕ್ಷಣೆ ಮಾಡಿದರು. ಕೊಕ್ಕರೆ ಬೆಳ್ಳೂರು ಪ್ರದೇಶದ ಕುರಿತು ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಕೊಕ್ಕರೆ ಬೆಳ್ಳೂರು ಪ್ರದೇಶದ ತಾಂತ್ರಿಕ ವರದಿಯನ್ನು ಬಿಡುಗಡೆಗೊಳಿಸಲಾಯಿತು. ರಂಗನ ತಿಟ್ಟು ಪಕ್ಷಿಧಾಮದ ಸಾಕ್ಷ ಚಿತ್ರ ಬಿಡುಗಡೆಗೊಳಿಸಲಾಯಿತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುರಿತ ಸಾಕ್ಷಚಿತ್ರ ಹಾಗೂ ಆನೆ ದಾಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಿರುವ ಕುರಿತ ಸಾಕ್ಷಚಿತ್ರ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಶಿವಕುಮಾರ್, ಶಾಸಕರಾದ ಅನಿಲ್ ಚಿಕ್ಕಮಾದು, ಡಿ ರವಿಶಂಕರ್, ದರ್ಶನ್ ಧ್ರುವನಾರಾಯಣ್, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ತಿಮ್ಮಯ್ಯ, ಸಿ ಎನ್ ಮಂಜೇಗೌಡ, ಉಪ ಮೇಯರ್ ಡಿ ರೂಪ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!