ಹೊಸ ದಿಗಂತ ವರದಿ, ಚಿತ್ರದುರ್ಗ:
ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪಿತೂರಿ ಮಾಡಿದ್ದೇವೆ ಎಂದು ನಮ್ಮ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅದನ್ನು ಇಂದು ಹೈಕೋರ್ಟ್ ರದ್ದು ಮಾಡಿದೆ ಎಂದು ಮಾಜಿ ಶಾಸಕ ಎಸ್.ಕೆ.ಬಸವರಾಜನ್ ತಿಳಿಸಿದರು.
ಶುಕ್ರವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸಂತ್ರಸ್ತರಿಗೆ ಬೆಂಬಲ ನೀಡಿದಾಗ ಭಯದ ವಾತಾವರಣ ಇತ್ತು. ನಾವು ಇಬ್ಬರೂ ಮಕ್ಕಳಿಗೆ ಮುಖ್ಯ ಸಾಕ್ಷಿಗಳಾಗಿದ್ದೆವು. ಈಗ ಪ್ರಕರಣ ರದ್ದು ಮಾಡಿರುವುದರಿಂದ ಹೈಕೋರ್ಟ್‌ನಲ್ಲಿ ನಮ್ಮ ಪರವಾಗಿ ತೀರ್ಪು ಬಂದಿರುವುದು ಸಂತಸ ತಂದಿದೆ. ಇದರಿಂದ ನ್ಯಾಯಕ್ಕೆ ಜಯ ಸಿಕ್ಕಂತಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ನಮ್ಮ ವಿರುದ್ಧ ಷಡ್ಯಂತ್ರ ಮಾಡಲಾಯಿತು. ಇದು ಪೊಲೀಸ್ ಇಲಾಖೆ ದಾರಿ ತಪ್ಪಿ ಮಾಡಿದ ಕೆಲಸ. ನಮ್ಮ ವಿರುದ್ಧ ಷಡ್ಯಂತ್ರ ಮಾಡಿ ನಮ್ಮನ್ನು ಜೈಲಿಗೆ ಕಳಿಸಲಾಯಿತು. ಮಕ್ಕಳು ನಮ್ಮ ವಿರುದ್ದ ಕೇಸು ಹಾಕಬೇಕಿತ್ತು. ಆದರೆ ಯಾವುದೇ ಕಾರಣವಿಲ್ಲದೆ ಅನಗತ್ಯವಾಗಿ ನಮ್ಮ ವಿರುದ್ಧ ಕೇಸ್ ಮಾಡಲಾಯಿತು. ಪೊಲೀಸರು ಮತ್ತು ಬಸವಪ್ರಭ ಶ್ರೀಗಳು ಷಡ್ಯಂತ್ರ ಮಾಡಿ ಕೇಸ್ ಹಾಕಿದ್ದಾರೆ ಎಂದು ಹೇಳಿದರು.
ಸಂತ್ರಸ್ತರಿಗೆ ಬೆಂಬಲ ನೀಡಿದ ಕಾರಣಕ್ಕೆ ಈ ರೀತಿ ಕಿರುಕುಳ ನೀಡಬಾರದು. ಹೀಗಾದಲ್ಲಿ ಮುಂದಿನ ದಿನಗಳಲ್ಲಿ ಸಂತ್ರಸ್ತರ ನೆರವಿಗೆ ಯಾರೂ ಬರುವುದಿಲ್ಲ. ಪೊಲೀಸ್ ಇಲಾಖೆ ದಾರಿ ತಪ್ಪಿ ಕೆಟ್ಟ ಕೆಲಸ ಮಾಡಿದೆ. ಒತ್ತಡಕ್ಕೆ ಒಳಗಾಗಿ ಕೇಸ್ ಹಾಕಿದ್ದರು. ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕುವೆ ಎಂದ ಅವರು, ಇಂದು ನ್ಯಾಯಾಲಯ ನೀಡಿದ ತೀರ್ಪಿನಿಂದ ಸಂಸತವಾಗಿದೆ. ನ್ಯಾಯಾಲಯ ನ್ಯಾಯ ಒದಗಿಸಿದೆ. ಸಂತ್ರಸ್ತ ಮಕ್ಕಳಿಗೂ ನ್ಯಾಯ ಸಿಗಲಿ ಎಂದು ಆಶಿಸಿದರು.
ಜಿ.ಪಂ. ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮಾತನಾಡಿ, ನಮ್ಮಿಬ್ಬರಿಗೆ ಯಾವುದೇ ನೋವಿಲ್ಲ. ನಮ್ಮ ಜೊತೆಗೆ ನಮ್ಮ ಬೆಂಬಲಿಗರಿಗೂ ಪೊಲೀಸರು ಹಿಂಸೆ ನೀಡಿದ್ದರು. ಇದು ನಮ್ಮ ಮನಸ್ಸಿಗೆ ತುಂಬಾ ನೋವಾಗಿದೆ. ಬಸವರಾಜೇಂದ್ರ ಯಾರೆಂದು ಪರಿಚಯ ಕೂಡಾ ಇಲ್ಲ. ಅನಗತ್ಯ ತೊಂದರೆ ನೀಡಲು ಆಡಿಯೋ ಬಂತು. ಉದ್ದೇಶ ಪೂರ್ವಕವಾಗಿ ಆಡಿಯೋ ಮಾಡಿದ್ದು. ನಾವು ಮಕ್ಕಳಿಗೆ ನ್ಯಾಯ ಕೊಡಿಸಬೇಕು ಎಂದು ಬೆಂಬಲ ನೀಡಿದ್ದೇವೆ ಎಂದರು.
ಉದ್ದೇಶ ಪೂರ್ವಕವಾಗಿ ನಮಗೆ ತೊಂದರೆ ನೀಡಿದರು. ನಮ್ಮ ಸುತ್ತಮುತ್ತಲಿನ ಜನರಿಗೆ ಟಾರ್ಚರ್ ಮಾಡಿದರು. ಪೊಲೀಸ್ ಇಲಾಖೆ ಇಂಥ ಕೆಲಸಕ್ಕೆ ಬೆಂಬಲ ನೀಡಬಾರದಿತ್ತು. ಸತ್ಯಕ್ಕೆ ಇಂದು ಜಯ ಸಿಕ್ಕಿದೆ, ಮುರುಘೇಶ ನಮಗೆ ನ್ಯಾಯ ಕೊಡಿಸಿದ್ದಾನೆ. ಮುಂದಿನ ದಿನಗಳಲ್ಲಿ ಸಂತ್ರಸ್ತರ ಪರವಾಗಿ ಹೋರಾಟ ಮುಂದುವರೆಸಲಾಗುವುದು ಎಂದರು.