Sunday, December 3, 2023

Latest Posts

ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಶಾಲಾ ಶೌಚಾಲಯದ ಗುಂಡಿ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಡಿಡಿಪಿಐ ರಂಗನಾಥಸ್ವಾಮಿ ಮತ್ತು ದ್ವಿತೀಯ ದರ್ಜೆ ಸಹಾಯಕ ಇಸ್ರಾರ್ ಅಹಮದ್ ಎಂಬವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮೂಡಿಗೆರೆ ತಾಲೂಕಿನ ಹೆಸ್ಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಪು ನಗರ ವಾಸಿ ಗುತ್ತಿಗೆದಾರ ಅಬುಬೇಕರ್ ರವರ ಪುತ್ರ ನೀಡಿದ ದೂರನ್ನು ಆಧರಿಸಿ, ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗನಾಥ ಸ್ವಾಮಿ, ಮತ್ತು ದ್ವಿತೀಯ ದರ್ಜೆ ಸಹಾಯಕ ಇಸ್ರಾರ್ ಅಹಮದ್ ರನ್ನು ಬಂಧಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೊಲ್ಲಿಬೈಲು ಮತ್ತು ಕಡೆಮಡಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೪.೮೦ ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯದ ಗುಂಡಿ ನಿರ್ಮಿಸಲಾಗಿತ್ತು. ಅದಕ್ಕೆ ಆಡಳಿತಾತ್ಮಕ ಅನುಮೋದನೆ ಅಗತ್ಯವಿತ್ತು. ಈ ಸಂಬಂಧ ಡಿಡಿಪಿಐ ಅವರನ್ನು ಭೇಟಿಯಾದಾಗ ಎಸ್‌ಡಿಎ ಅಸ್ರಾರ್ ಅಹಮದ್ ಮೂಲಕ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಈ ಸಂಬಂಧ ಮುಂಗಡವನ್ನೂ ಪಡೆಯಲಾಗಿತ್ತು. ಉಳಿಕೆ ಹಣ ನೀಡುವ ಕುರಿತು ಡಿಡಿಪಿಐ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಮುದ್ರಿಸಿಕೊಂಡು ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು.

ಶುಕ್ರವಾರ ೩೦೦೦ ರೂ. ನೀಡುವ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಿ ರಂಗನಾಥ ಸ್ವಾಮಿ ಮತ್ತು ಅಸ್ರಾರ್ ಅಹಮದ್ ರವರನ್ನು ವಶಕ್ಕೆ ಪಡೆಯಲಾಗಿದೆ. ದಾಳಿಯಲ್ಲಿ ವೃತ್ತನಿರೀಕ್ಷರುಗಳಾದ ಮಲ್ಲಿಕಾರ್ಜುನ್, ಅನಿಲ್ ರಾಥೋಡ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!