May 28, 2026
Thursday, May 28, 2026
spot_img

ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು: ಸಿದ್ದರಾಮಯ್ಯ ಭಾವುಕ ಪೋಸ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಕುರಿತು ಭಾವನಾತ್ಮಕ ಫೋಸ್ಟ್ ವೊಂದನ್ನು ಹಂಚಿಕೊಂಡ ಅವರು, ನಿಮ್ಮ ಪ್ರೀತಿ. ನಿಮ್ಮ ನಂಬಿಕೆ. ನನ್ನ ಶಾಶ್ವತ ಶಕ್ತಿ ಎಂದು ಬರೆದುಕೊಂಡಿದ್ದಾರೆ.

ನನ್ನನ್ನು ತಮ್ಮಲ್ಲಿ ಒಬ್ಬನೆಂದು ಪರಿಗಣಿಸಿದ, ಆಶೀರ್ವದಿಸಿದ, ಪ್ರೋತ್ಸಾಹಿಸಿದ, ಸರಿಪಡಿಸಿದ, ಕಷ್ಟದ ಸಮಯದಲ್ಲಿ ನನ್ನೊಂದಿಗೆ ನಿಂತ ಲಕ್ಷಾಂತರ ಪ್ರೀತಿಯ ಹೃದಯಗಳಿಗೆ ಮುಂದೆ ತಲೆಬಾಗುತ್ತೇನೆ. ನಾನು ಇಂದು ಏನಾಗಿದ್ದೇನೆಯೋ ಅದಕ್ಕೆ ನೀವೇ ಕಾರಣ ಎಂದು ಭಾವುಕರಾಗಿದ್ದರೆ.

ಭಾವನಾತ್ಮಕ ಫೋಸ್ಟ್

ಇಂದು ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ. ಹಳ್ಳಿಗಾಡಿನಲ್ಲಿ ಹುಟ್ಟಿಬೆಳೆದ ನಾನು ಮುಂದೊಂದು ದಿನ ಈ ರಾಜ್ಯದ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಎರಡೆರಡು ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸನ್ನು ಸಹ ಕಂಡಿರಲಿಲ್ಲ. ಇಂತದ್ದೊಂದು ದುಬಾರಿಯಾದ ಕನಸು ನನಸಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ ಎಂದು ತಿಳಿಸಿದರು.

ಹೃದಯವಂತ ಕನ್ನಡಿಗರಿಗೆ ನಾನು ಚಿರಋಣಿ

ಬುದ್ಧ, ಬಸವ, ಬಾಬಾ ಸಾಹೇಬರು, ಮಹಾತ್ಮ ಗಾಂಧಿಯವರೇ ನನ್ನ ಆದರ್ಶ. ನಲವತ್ತೆಂಟು ವರ್ಷಗಳ ರಾಜಕೀಯ ಜೀವನದಲ್ಲಿ ನಾಡಿನ ಅವಕಾಶ ವಂಚಿತ, ಶೋಷಿತ, ಬಡ ಜನರ ಪರವಾಗಿ ಪ್ರಾಮಾಣಿಕವಾಗಿ ದುಡಿದ ಸಂತೃಪ್ತಿಯಿದೆ. ನನ್ನನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಿ, ಈ ವರೆಗೆ ಮುಖ್ಯಮಂತ್ರಿಯಾಗಿ ಜನಸೇವೆಗೆ ಅವಕಾಶ ಮಾಡಿಕೊಟ್ಟ ಪಕ್ಷದ ಶಾಸಕರಿಗೆ, ನನ್ನ ಹೆಗಲಿಗೆ ಹೆಗಲಾಗಿ ದುಡಿದ ಸಂಪುಟ ಸಹೋದ್ಯೋಗಿಗಳಿಗೆ, ಅವಕಾಶ ನೀಡಿದ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಗೂ ನನ್ನ ರಾಜಕೀಯ ಬದುಕಿನುದ್ದಕ್ಕೂ ಪ್ರೀತಿ ತುಂಬಿದ, ಅಭಿಮಾನಿಸಿದ, ಇಲ್ಲಿಯ ತನಕ ಕೈಹಿಡಿದು ನಡೆಸಿದ ಹೃದಯವಂತ ಕನ್ನಡಿಗರಿಗೆ ನಾನು ಚಿರಋಣಿಯಾಗಿರುವೆ ಎಂದು ತಿಳಿಸಿದರು.

ರಾಜೀನಾಮೆ ಸಕ್ರಿಯ ರಾಜಕಾರಣಕ್ಕಲ್ಲ

ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು. ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರವೇ ಸೀಮಿತ, ಸಕ್ರಿಯ ರಾಜಕಾರಣಕ್ಕಲ್ಲ. ನನ್ನ ಜೀವದ ಕೊನೆಯುಸಿರು ಇರುವ ವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಭರವಸೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !