ಹೊಸದಿಗಂತ ವರದಿ, ಬಾಗಲಕೋಟೆ:
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 32 ಕೋಟಿ ರೂ.ಗಳ ವೆಚ್ಚದಲ್ಲಿ ನಗರದ ಬಡ ಕುಟುಂಬಗಳಿಗೆ 500 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು 6 ತಿಂಗಳಲ್ಲಿ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನವನಗರದ ವಾಂಬೆ ಕಾಲೋನಿಯ ಬಳಿ 500 ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 500 ಮನೆಗಳನ್ನು G+1 ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ನಗರದ ಅಲ್ಪಸಂಖ್ಯಾತ, ಎಸ್ಸಿ,ಎಸ್ಟಿ, ಸಾಮಾನ್ಯ, ಹಿಂದುಳಿದ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವರ್ಗದವರಿಗೆ ಮನೆಗಳನ್ನು ನೀಡಲಾಗಿದೆ . ಯಾವುದೇ ಸಮಾಜವನ್ನು ಕಡೆಗಣನೆ ಮಾಡಿಲ್ಲ ಎಂದರು.
ಮನೆ ನೀಡುತ್ತೇವೆ ಎಂದು ಮಧ್ಯವರ್ತಿಗಳು ಯಾರಾದರೂ ದುಡ್ಡು ಕೇಳಿದರೆ ಕೊಡಬೇಡಿ. ಯಾರಿಗಾದರೂ ದುಡ್ಡು ನೀಡಿದರೆ ಅದಕ್ಕೆ ನೀವೇ ಜವಾಬ್ದಾರಿ ಎಂದು ಹೇಳಿದರು.
ಬಾಗಲಕೋಟೆ ನಗರದಲ್ಲಿ ಈಗಾಗಲೇ ವಿವಿಧ ವಸತಿ ಯೋಜನೆಗಳಾದ ಹುಡ್ಕೋ, ವಾಂಬೆ, ಐ.ಎಚ್.ಎಸ್‌ಡಿ.ಪಿ ಯೋಜನೆ ಸೇರಿ ಒಟ್ಟು 1478 ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ನೀಡಲಾಗಿದೆ. ಈಗ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 500 ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಈಗ ನಿರ್ಮಿಸುತ್ತಿರುವ ಪ್ರತಿಯೊಂದು ಮನೆ ಒಟ್ಟು 7.21 ಲಕ್ಷ ಮೊತ್ತದಲ್ಲಿದ್ದು, ಕೇಂದ್ರ ಸರ್ಕಾರ 1.50 ಲಕ್ಷ ರೂ., ರಾಜ್ಯ ಸರ್ಕಾರದಿಂದ 2 ಲಕ್ಷ ಸಬ್ಸಿಡಿ ದೊರೆಯಲಿದೆ. ಉಳಿದ ಮೊತ್ತ ಬ್ಯಾಂಕಿನಿಂದ ಸಾಲ ದೊರೆಯಲಿದೆ. 20 ವರ್ಷಗಳ ಕಾಲ ಸಾಲದ ಕಂತು ತುಂಬಲು ಫಲಾನುಭವಿಗಳಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ