ಜನರಿಗೆ ಬೇಕಿರುವುದು ಶಾಂತ ಕೊಡಗು- ಹಿಂಸೆಯ ಕೊಡಗಲ್ಲ: ಸಿದ್ಧರಾಮಯ್ಯ ವಿರುದ್ಧ ಶಿವಕುಮಾರ್ ಕಿಡಿ

ಹೊಸದಿಗಂತ ವರದಿ, ಮಡಿಕೇರಿ:
ಕೊಡಗಿನವರಿಗೆ ಬೇಕಿರುವದು ಕಾವೇರಿ ತಾಯಿಯ ಶಾಂತ ಭೂಮಿಯೇ ಹೊರತು ರಾಜಕೀಯ ರಣರಂಗದ ಕೊಡಗು ಅಲ್ಲ ಎಂದು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಪಾರಂಪರಿಕತೆ, ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಮತ್ತು ತಳಹದಿಯ ಮೇಲೆ ಪರಸ್ಪರ ನೆಮ್ಮದಿಯ ಮತ್ತು ಶಾಂತಿಯಿಂದ ಇದ್ದ ಕೊಡಗು ಜಿಲ್ಲೆಯನ್ನು ಕಾಂಗ್ರೆಸ್ ಪಕ್ಷ ವ್ಯವಸ್ಥಿತವಾಗಿ ವಿಭಜಿಸುವ ಮತ್ತು ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದೆ. ಕೊಡಗಿನ ಜನತೆ ಜಾಗೃತರಾಗದಿದ್ದರೆ ವೈಭವದ ಕೊಡಗನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಕೊಡಗು ಜಿಲ್ಲೆಗೆ ಆಗಮಿಸಿದ ಬಳಿಕ ತಲೆದೋರಿದ ಸಾಮಾಜಿಕ ವೈಪರೀತ್ಯಕ್ಕೆ ಸ್ವತಃ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಅವರು ಆರೋಪಿಸಿದ್ದಾರೆ.
ರಣರಂಗ ಮಾಡಲು ಹೊಂಚು:
ಭಾರತೀಯ ಜನತಾ ಪಕ್ಷದ ವಿರುದ್ಧ ಮತ್ತು ಕೊಡಗಿನ ದಕ್ಷ ಪೊಲೀಸ್ ವ್ಯವಸ್ಥೆ ಹಾಗೂ ನಿಷ್ಟ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲಚೀರ ಅಯ್ಯಪ್ಪ ಅವರನ್ನು ವರ್ಗಾಯಿಸಲು ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಗೆ ನೆರೆಯ ಕೇರಳ ಹಾಗೂ ಇತರ ಕಡೆಗಳಿಂದ ಮತೀಯ ಉಗ್ರ ಸಂಘಟನೆಗಳು ಪಾಲ್ಗೊಳ್ಳಲು ಮತ್ತು ಕೊಡಗನ್ನು ರಣರಂಗ ಮಾಡಲು ಹೊಂಚು ಹಾಕಿದ್ದವು ಎಂಬ ಪೊಲೀಸ್ ಗುಪ್ತಚರ ಮಾಹಿತಿ ಹೊರಬಿದ್ದ ತಕ್ಷಣ ಪ್ರಕೃತಿ ರಮಣೀಯ ನೈಜ ಕೊಡಗು ಮತ್ತು ನೆಮ್ಮದಿ, ಸೌಹಾರ್ದತೆಯಿಂದಿದ್ದ ಕೊಡಗಿನ ಜನತೆ ಬೆಚ್ಚಿ ಬೀಳುವಂತಾಗಿದೆ ಎಂದು ಶಿವಕುಮಾರ್ ನಾಣಯ್ಯ ವಿವರಿಸಿದ್ದಾರೆ.
ಕೊಡಗಿನ ಜನತೆ ರಾಷ್ಟ್ರಪ್ರೇಮಿಗಳು, ದೇಶ ಸೇವೆಗೆ ಮನೆ, ಸುಖ ಜೀವನ ತ್ಯಾಗ ಮಾಡಿ ಸೇನೆಗೆ ಹಾಗೂ ದೇಶ ಕಟ್ಟುವ ಕೆಲಸಕ್ಕೆ ಹೋದವರು. ಕೊಡಗಿನ ಜನತೆ ಎಂದಿದ್ದರೂ ನೈಜ ಕೊಡಗು, ಪ್ರಾಕೃತಿಕ ಕೊಡಗನ್ನು ಬಯಸುವವರು. ಕೊಡವರು, ಕ್ರೈಸ್ತರು, ನಾಯರ್’ಗಳು ಮುಂತಾದ ಸಮುದಾಯದ ಹೆಂಗಸರು, ಹೆಣ್ಣು ಮಕ್ಕಳನ್ನು ,ಕುತಂತ್ರದಿಂದ ಅಮಾನುಷವಾಗಿ ಹತ್ಯೆ ಮಾಡಿದ ಮತಾಂಧ, ಕ್ರೂರಿ ಟಿಪ್ಪು ಈ ದೇಶದ ಮೊಟ್ಟ ಮೊದಲ ಭಯೋತ್ಪಾದಕ. ಅಂತಹ ಟಿಪ್ಪುವನ್ನು ಸಿದ್ದರಾಮಯ್ಯ ಹಾಗೂ ಅವರ ಕಾಂಗ್ರೆಸ್ ವೈಭವೀಕರಿಸಿದಾಗ, ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್’ರನ್ನು ಸಿದ್ದರಾಮಯ್ಯ ಅವಮಾನ,ಅವಹೇಳನ ಮಾಡಿದಾಗ ಸಹಜವಾಗಿ ಸ್ವಾರ್ಥ, ಅಧಿಕಾರದ ವಾಂಛೆಗೆ ಮುಗಿಬೀಳದ ಕೊಡಗು ಮೂಲ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ಸಿದ್ದರಾಮಯ್ಯನವರಿಗೆ ಘೆರಾವ್ ಹಾಕಿದ್ದಾರೆ. ಆದರೆ ಅಂತಹ ಕೊಡಗನ್ನು ಜಾತಿ, ಧರ್ಮದ ಹೆಸರಿನಲ್ಲಿ ವಿಂಗಡಿಸಲು ಆಸ್ಪದ ಕೊಡುವಷ್ಟು ಕೊಡಗಿನ ಜನತೆ ಮೂರ್ಖರಲ್ಲ ಎಂದೂ ಶಿವಕುಮಾರ್ ನಾಣಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯನವರ ಇನ್ನೊಂದು ಚಾಮುಂಡೇಶ್ವರಿ ಕ್ಷೇತ್ರವನ್ನು, ಜಮೀರ್ ಅಹಮದ್’ನ ಚಾಮರಾಜಪೇಟೆಯನ್ನು ಸೃಷ್ಟಿಸಲು ಸಾಧ್ಯವಿದೆ ಆದರೆ ದಕ್ಷಿಣ ಕಾಶ್ಮೀರ, ಭಾರತದ ಸ್ವಿಜರ್ಲ್ಯಾಂಡ್ ಎಂಬ ಹೆಗ್ಗಳಿಕೆ ಹೊತ್ತಿರುವ, ದಕ್ಷಿಣ ಕರ್ನಾಟಕ, ತಮಿಳುನಾಡಿಗೆ ನೀರು ನೀಡುವ, ಪವಿತ್ರ ತೀರ್ಥ ಸ್ವರೂಪಿಣಿಯ ಕೊಡಗನ್ನು ಸೃಷ್ಟಿ ಮಾಡಲು ಯಾರಿಂದಲು ಸಾಧ್ಯವಿಲ್ಲ. ದೇಶದ ಜನತೆಗೆ ಬೇಕಿರುವುದು ನೈಜ ಕೊಡಗು, ಪ್ರಾಕೃತಿಕ ಕೊಡಗು, ಸಾಂಸ್ಕೃತಿಕ ಕೊಡಗು ಹೊರತು ಕಲುಷಿತ ಕೊಡಗು,ರಾಜಕೀಯ ಗೊಂದಲದ ಕೊಡಗು,ಹಿಂಸೆಯ ಕೊಡಗು ಅಲ್ಲ ಎಂದೂ ತೇಲಪಂಡ ಶಿವಕುಮಾರ್ ನಾಣಯ್ಯ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!