ಕೂಡಿಗೆಯಲ್ಲಿ ಹೆಲಿಪೋರ್ಟ್ ನಿರ್ಮಾಣ: ದೆಹಲಿಯ ತಾಂತ್ರಿಕ ತಂಡದಿಂದ ಮಾಹಿತಿ ಸಂಗ್ರಹ

ಹೊಸದಿಗಂತ ವರದಿ ಕುಶಾಲನಗರ:

ಇಲ್ಲಿಗೆ ಸಮೀಪದ ಕೂಡಿಗೆಯ ಕೃಷಿ ಕ್ಷೇತ್ರದಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ಕಾಯ್ದಿರಿಸಲಾಗಿರುವ ಜಾಗಕ್ಕೆ ದೆಹಲಿಯ ವಿಮಾನಯಾನ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತಲ್ಲದೆ, ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆಯಿತು.

ಕೃಷಿ ಇಲಾಖೆಗೆ ಸೇರಿದ ಸುಮಾರು 47 ಎಕರೆಗಳಷ್ಟು ಪ್ರದೇಶವನ್ನು ಹೆಲಿಪೋರ್ಟ್ ನಿರ್ಮಾಣಕ್ಕಾಗಿ ಕಾಯ್ದಿರಿಸಲಾಗಿದ್ದು, ಈ ಜಾಗವನ್ನು ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಒಳಪಡುವ ಪವನ್ ಲಿಮಿಟೆಡ್ ಸಂಸ್ಥೆಯ ತಂಡದ ಅಧಿಕಾರಿಗಳು ಜಿಲ್ಲೆಯ ವಿವಿಧ ಅಧಿಕಾರಿ ತಂಡದೊಂದಿಗೆ ಪರಿಶೀಲಿಸಿದರು.

ದೆಹಲಿ ಸಂಸ್ಥೆಯ ವಿಭಾಗೀಯ ನಿರ್ದೇಶಕ ಕ್ಯಾಪ್ಟನ್ ಸಲಿಲ್ ಪಾರಸರ್ ಮತ್ತು ಪಿ. ಕೆ. ಮೊರ್ಗರ್, ರಾಜ್ಯ ಸರ್ಕಾರದ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಕ್ರಿಯಾ ಯೋಜನೆ ಇಂಜಿನಿಯರ್ ಅಕ್ಷಯ ಹೊಂಡಗಾರ್, ಕುಶಾಲನಗರ ತಾಲೂಕು ತಹಶಿಲ್ದಾರ್ ಕೆ.ಪಿ.ಪ್ರಕಾಶ್, ವಿವಿಧ ಇಲಾಖೆಯ ಅಧಿಕಾರಿಗಳು, ಕಾಯ್ದಿರಿಸಿದ ಜಾಗದ ಸಮೀಪದಲ್ಲಿ ಹರಿಯುವ ಹಾರಂಗಿ ನದಿಯನ್ನು ವೀಕ್ಷಿಸಿದರಲ್ಲದೆ, ಯಂತ್ರದ ಮೂಲಕ ಈಗಾಗಲೇ ಭೂ ಮಾಪನ ಇಲಾಖೆಯಿಂದ ಗುರುತಿಸಲ್ಪಟ್ಟಿರುವ ಜಾಗದ ಎಲ್ಲಾ ವಿಭಾಗಗಳನ್ನು ಪರಿಶೀಲನೆ ಮಾಡಿದರು.

ತಂಡದ ಅಧಿಕಾರಿಗಳು ಮೂರು ಗಂಟೆಗಳ ಕಾಲ ಕೃಷಿ ಕ್ಷೇತ್ರದ ಜಾಗದಲ್ಲಿ ಹೆಲಿಪೋರ್ಟ್’ಗೆ ಸಂಬಂಧಿಸಿದ ಮಧ್ಯ ಭಾಗದ ಜಾಗದ ಪರಿಶೀಲನೆ, ನಂತರ ಒಳ ಮತ್ತು ಹೊರ ಭಾಗದ ಜಾಗ ವಿಸ್ತೀರ್ಣ, ಬರುವ ದಾರಿ ಸಮೀಪದ ಸೈನಿಕ ಶಾಲೆಯ ಅಂತರ, ಹಾರಂಗಿಯಲ್ಲಿ ಉತ್ಪಾದನೆಯಾಗಿ ಕುಶಾಲನಗರದ‌ ಗ್ರಿಡ್’ಗೆ ಸಂಪರ್ಕಗೊಂಡಿರುವ ಹೈಟೆನ್ಷನ್ ವಿದ್ಯುತ್ ಮಾರ್ಗ, ಮಳೆಗಾಲದಲ್ಲಿ ನದಿಯಲ್ಲಿ ಉಂಟಾಗುವ ಪ್ರವಾಹ ಸೇರಿದಂತೆ ಸಮಗ್ರವಾದ ಮಾಹಿತಿಯನ್ನು ಈ ತಂಡ ಹಂತ ಹಂತವಾಗಿ ಪಡೆದುಕೊಂಡಿತು.

ರಾಜ್ಯ ಸರ್ಕಾರ ಈ ಬಾರಿಯ ಬಜೆಟ್’ನಲ್ಲಿ ಕೊಡಗು ಸೇರಿದಂತೆ ಇತರೆ ಎರಡು ಜಿಲ್ಲೆಗಳಿಗೆ ತಲಾ 10 ಕೋಟಿ ರೂ.ಗಳನ್ನು ಹೆಲಿಪೋರ್ಟ್ ನಿರ್ಮಾಣಕ್ಕಾಗಿ ಬಿಡುಗಡೆ ಮಾಡಿದೆ. ಅದರನ್ವಯ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಕಳೆದ ತಿಂಗಳು ಸಂಬಂಧಿಸಿದ ಇಲಾಖೆಯವರಿಗೆ ಕಾರ್ಯಚಟುವಟಿಕೆಗಳನ್ನು ಅರಂಭಿಸಲು ಒತ್ತಾಯಿಸಿದ್ದರು.

ಅದರಂತೆ ರಾಜ್ಯ ಮತ್ತು ದೆಹಲಿಯ ಹಿರಿಯ ಅಧಿಕಾರಿಗಳ ತಂಡದವರು ಹೆಲಿಪೋರ್ಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾರ್ಯಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದು,ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿಯನ್ನು ನೀಡಲಿದ್ದಾರೆ.

ಕೂಡಿಗೆಯಲ್ಲಿ ಏರ್’ಸ್ಟಿಪ್’ನೊಂದಿಗೆ ಹೆಲಿಪೋರ್ಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆರು ತಿಂಗಳ ಹಿಂದೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ‌ರಾಜ್ಯ ಸರ್ಕಾರದ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ.ಆರ್. ರವಿ ಹಾಗೂ ತಾಂತ್ರಿಕ ತಂಡ ಮತ್ತು ನಿಗಮದ ಸಲಹಾ ಸಮಿತಿಯ ಹಿರಿಯ ಅಧಿಕಾರಿಗಳೊಂದಿಗೆ ಕೂಡಿಗೆಯ ಕೃಷಿ ಕ್ಷೇತ್ರದ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅದರ ಮುಂದಿನ ಭಾಗವಾಗಿ ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು.
ಸ್ಥಳ ಪರಿಶೀಲನೆ ಸಂದರ್ಭ ಕುಶಾಲನಗರ ತಾಲೂಕು ತಹಶಿಲ್ದಾರ್ ಕೆ.ಪಿ. ಪ್ರಕಾಶ್, ಉಪ ತಹಶಿಲ್ದಾರ್ ಮಧುಸೂದನ್, ತಾಲೂಕು ಭೂಮಾಪನ ಅಧಿಕಾರಿ ವಿರೂಪಾಕ್ಷ, ಸೆಸ್ಕ್ ಕಾರ್ಯಪಾಲಕ ಅಭಿಯಂತರ ಅನಿತಾಬಾಯಿ ಒಳಚರಂಡಿ ಇಲಾಖೆಯ ಅಧಿಕಾರಿ ಹರ್ಷಿತ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಹಾಜರಿದ್ದರು.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, ರಾಜ್ಯ ಸರ್ಕಾರ ಈಗಾಗಲೇ ಬಜೆಟ್’ನಲ್ಲಿ 10 ಕೋಟಿ ರೂ.ಗಳನ್ನು ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ ಏರ್ಸ್ಟಿಪ್ ನೊಂದಿಗೆ ಹೆಲಿಪೋರ್ಟ್ ನಿರ್ಮಾಣಕ್ಕೆ ಕಾಯ್ದಿರಿಸಿದೆ. ಅದರಂತೆ ವಿವಿಧ ಕ್ರಿಯಾ ಯೋಜನೆಗಳು ಪ್ರಗತಿಯಲ್ಲಿವೆ. ಹೆಲಿಪೋರ್ಟ್ ನಿರ್ಮಾಣದ ನಂತರ ಮಿನಿ ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಯೋಜನೆಯನ್ನು ಜಾರಿಗೆ ತಂದು ಕಾರ್ಯಗತಗೊಳಿಸಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!