ಬಳ್ಳಾರಿಯಲ್ಲಿ ಜೀನ್ಸ್ ಅಪರೆಲ್ ಪಾರ್ಕ್ ನಿರ್ಮಾಣ: ಸಚಿವ ಸಂತೋಷ್ ಲಾಡ್

ಹೊಸದಿಗಂತ ವರದಿ,ಬಳ್ಳಾರಿ:

ನಗರದಲ್ಲಿ 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ಜೀನ್ಸ್ ಅಪರೆಲ್ ಪಾರ್ಕ್ ನಿರ್ಮಿಸಲಾಗುವುದು, ನಮ್ಮದು ನುಡಿದಂತೆ ನಡೆಯುವ ಪಕ್ಷ, ಬಿಜೆಪಿ ಅವರಂತೆ ಸುಳ್ಳು ಹೇಳುವ ಸಂಪ್ರದಾಯ ನಮ್ಮಲ್ಲಿಲ್ಲ ಎಂದು ಕಾರ್ಮಿಕ, ಧಾರವಾಡ ಜಿಲ್ಲಾ ಉಸ್ತವಾರಿ ಸಚಿವ ಸಂತೋಷ್ ಲಾಡ್ ಅವರು ಹೇಳಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಭಾರತ್ ಜೋಡೋ ಪಾದಯಾತ್ರೆ ವೇಳೆ ಯುವ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಜನರಿಗೆ ನೀಡಿದ ಭರವಸೆಯಂತೆ, ಜೀನ್ಸ್ ಪಾರ್ಕ್ ನಿರ್ಮಿಸಲಾಗುವುದು, ಇದರಿಂದ ಜೀನ್ಸ್ ಉದ್ಯಮಕ್ಕೆ ಉತ್ತೇಜನ ನೀಡುವುದರ ಜೊತೆಗೆ ಕಾರ್ಮಿಕರಿಗೆ ಶಾಶ್ವತವಾಗಿ ಉದ್ಯೋಗ ದೊರೆಯಲಿದೆ, ನಮ್ಮ ಬಳ್ಳಾರಿ ಜೀನ್ಸ್ ಉತ್ಪಾದನೆಯಲ್ಲಿ ದೇಶ ವಿದೇಶಗಳ ಗಮನಸೆಳೆಯಲಿದೆ, ಖಂಡಿತ ನೀಡಿದ ಭರವಸೆಯಂತೆ ನಡೆದು ಕೊಳ್ಳಲಾಗುವುದು ಎಂದರು.

ಲೋಕಸಭೆ ಚುನಾವಣೆ ಬಳಿಕ ನಮ್ಮ ಸರ್ಕಾರದ 5 ಗ್ಯಾರಂಟಿಗಳು ಸ್ಥಗಿತಗೊಳ್ಳಲಿವೆ ಎನ್ನುವುದು ಶುದ್ಧ ಸುಳ್ಳು, ನಮ್ಮ ಈ 5 ಜನಪರ ಯೋಜನೆಗಳು ರಾಜ್ಯದ ಫಲಾನುಭವಿಗಳಿಗೆ ನೇರವಾಗಿ 58 ಸಾವಿರ ಕೋಟಿ ರೂ.ತಲುಪಿದೆ. ಮುಂಬರುವ ಲೋಕಸಭೆ ಚುನಾವಣೆಯ ಫಲಿತಾಂಶ ಗ್ಯಾರಂಟಿ ಯೋಜನೆಗಳದ್ದೆ ಗ್ಯಾರಂಟಿ, ರಾಜ್ಯದ ಜನರು ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದರು.

ಬಿಜೆಪಿ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ, ನಿತ್ಯ ಬೆಳಕು ಹರಿದರೆ ಸಾಕು ಮೋದಿ ಮೋದಿ ಎನ್ನುವ ಸುದ್ದಿಗಳೇ ಹೆಚ್ಚು ಕಾಣುತ್ತಿವೆ, ಮೋದಿ ಅವರ ದುರಾಡಳಿತದ ಬಗ್ಗೆ, ವೈಫಲ್ಯಗಳ ಬಗ್ಗೆ ಆಸ್ಪದ ಇಲ್ಲದoತಾಗಿದೆ.
ಮಾಧ್ಯಮಗಳಲ್ಲಿ ನಮಗೆ ಸ್ಥಳವೇ ದೊರೆಯದಂತಾಗಿದೆ. ಮಾಧ್ಯಮಗಳು ನಮಗೂ ಸಮಾನ ಅವಕಾಶ ನೀಡಬೇಕು, ಬಿಜೆಪಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ 1 ತಿಂಗಳು ಟಿವಿ ಬಂದ್ ಮಾಡಲಿ ನೋಡೋಣ, 6.5 ಸಾವಿರ ಕೋಟಿ ರೂ. ಪ್ರಚಾರಕ್ಕೆ ನೀಡಿದ್ದಾರೆ ಎಂದರೆ, ಅವರ ಪ್ರಚಾರದ ಅಬ್ಬರ ಹೇಗಿದೆ ಎಂಬುದು ಸಾಬೀತಾಗಿದೆ. ಯುಪಿಎ ಸರ್ಕಾರದಲ್ಲಿ ನಡೆದ ಕೆಲಸಗಳು, ಎನ್ ಡಿಎ ಆಡಳಿತದ ಅಭಿವೃದ್ದಿ ಕೆಲಸಗಳ ಬಗ್ಗೆ ಚರ್ಚೆ ನಡೆಸಲು ಡಿಬೇಟ್ ನಡೆಸಿ, ತಾಕತ್ತಿದ್ದರೆ ನೇರವಾಗಿ ಚರ್ಚಿಸೋಣ ಎಂದು ಸವಾಲು ಹಾಕಿದರು. ನಗರ ಕ್ಷೇತ್ರದ ಕಾಂಗ್ರೇಸ್ ಶಾಸಕ ನಾರಾ ಭರತ್ ರೆಡ್ಡಿ ಅವರ ಕಚೇರಿ, ಮನೆ ಮೇಲೆ ನಡೆಯುತ್ತಿರುವ ಇಡಿ ಅಧಿಕಾರಿಗಳ ದಾಳಿ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಇದರ ಬಗ್ಗೆ ಏನು ಹೇಳೋಲ್ಲ, ಕೇಳಬೇಡಿ ಎಂದು ಜಾರಿಕೊಂಡರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್.ಸ್ವಾಮಿ, ಪಾಲಿಕೆ ಮೇಯರ್ ಬಿ.ಶ್ವೇತಾ ಸೋಮು, ಮುಖಂಡರಾದ ಮುಂಡರಗಿ ನಾಗರಾಜ್, ಎ. ಮಾನಯ್ಯ, ಪಾಲಿಕೆ ಸದಸ್ಯ ಪೀ.ಗಾದೆಪ್ಪ, ಪಾಲಿಕೆ ಸದಸ್ಯೆ ಉಮಾದೇವಿ ಶಿವರಾಜ್, ಬಿ.ಎಂ.ಪಾಟೀಲ್, ಸಚಿವರ ಸಹೋದರ ಬಿ.ವೆಂಕಟೇಶ ಪ್ರಸಾದ್, ನಾಗರಾಜ, ಗೋವರ್ಧನ, ಸೇರಿದಂತೆ ಇತರರಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!