ಕೆಲವೇ ತಿಂಗಳಲ್ಲಿ ಕಾನೂನಿ ಚೌಕಟ್ಟಿನಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣ: ಎಚ್.ಡಿ.ಕುಮಾರಸ್ವಾಮಿ

ಹೊಸದಿಗಂತ ವರದಿ,ನಾಗಮಂಗಲ :

ಜಿಲ್ಲೆಯ ಜನರು ತಮಗೆ ಆಶೀರ್ವಾದ ಮಾಡಿದ ಕೆಲವೇ ತಿಂಗಳಲ್ಲಿ ಮೇಕೆದಾಟು ಯೋಜನೆಯನ್ನು ಕಾನೂನಿ ಚೌಕಟ್ಟಿನಲ್ಲಿ ಬಗೆ ಹರಿಸಿ, ಅಣೆಕಟ್ಟು ನಿರ್ಮಾಣ ಮಾಡಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಮಂಡ್ಯ ಲೋಕಸಭಾ ಚುನಾವಣೆಯ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕಾರ್ಯಕರ್ತರ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರಿಗೆ ನಾನು ನನ್ನ ರಾಜಕೀಯ ಜೀನವದಲ್ಲಿ ಅಲ್ಪ ಸ್ವಲ್ಪ ಕಾಣಿಕೆ ಕೊಟ್ಟಿದ್ದೇನೆ ಎನ್ನುವುದು ನಿಮ್ಮ ಹೃದಯದಲ್ಲಿದ್ದರೆ ಈ ಚುನಾವಣೆಯಲ್ಲಿ ನನಗೆ ಹಾಲನ್ನಾದರೂ ಕೊಡಿ ವಿಷವನ್ನಾದರೂ ಕೊಡಿ ಎರಡನ್ನೂ ಸಮಚಿತ್ತವಾಗಿ ಸ್ವೀಕರಿಸುತ್ತೇನೆ ಎಂದರು.

ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣದ ವಿಷಯ ಇವತ್ತಿನದಲ್ಲ. ಸುಮಾರು 30ವರ್ಷಗಳಷ್ಟು ಹಳೆಯದು, ತಾವು ಮುಖ್ಯಮಂತ್ರಿಯಾಗಿದ್ದಾಗ ಯೋಜನೆ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಳಿ ಮಾತನಾಡಿದ್ದೆ, ಜತೆಗೆ ಡಿಪಿಆರ್ ಮಾಡಿಸಿದ್ದೆ, ಆ ಕಡತ ದೆಹಲಿಯಲ್ಲಿಯೇ ಇದೆ. ತಮ್ಮನ್ನು ಹಾಗೂ ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಮೇಕೆದಾಟು ಯೋಜನೆಯನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಬಗೆ ಹರಿಸಲಾಗುವುದು ಎಂದರು.

ಮೇಕೆದಾಟು ಯೋಜನೆ ಬಗ್ಗೆ ವೀರಾವೇಶದ ಮಾತುಗಳನ್ನಾಡುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಪಕ್ಕದ ರಾಜ್ಯದ ಸ್ನೇಹಿತರು ಹಾಗೂ ಡಿಎಂಕೆ ಪಕ್ಷದ ನಾಯಕ ಸ್ಟಾಲೀನ್ ಬಳಿ ಮೇಕೆದಾಟು ಯೋಜನೆಗೆ ಒಪ್ಪಿಗೆ ಪಡೆದುಕೊಂಡು ಬರಲಿ, ನಾನು ಪ್ರಧಾನಿ ಬಳಿ ಎರಡು ಸೆಕೇಂಡ್‌ಗಳಲ್ಲಿ ಅನುಮತಿ ಕೊಡಿಸುತ್ತೇನೆ, ಇದು ಇವರ ಕೈಯಲ್ಲಿ ಆಗುತ್ತಾ ಎಂದು ಪ್ರಶ್ನೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!