ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ 49 ಓವರ್ಗಳಲ್ಲಿ 10 ವಿಕೆಟ್ ಕಳೆದುಕೊಂಡು 286 ರನ್ ಗಳಿಸಿದೆ.ನೆದರ್ಲೆಂಡ್ಸ್ ಗೆಲುವಿಗೆ 287 ರನ್ ಬೇಕಿದೆ.
ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ನಿರೀಕ್ಷಿತ ಆರಂಭ ಪಡೆಯಲಿಲ್ಲ.ಕೇವಲ 15 ಎಸೆತಗಳಲ್ಲಿ 3 ಬೌಂಡರಿಸಹಿತ 12 ರನ್ ಗಳಿಸಿದ ಫಖರ್ ಜಮಾನ್, ನೆದರ್ಲೆಂಡ್ಸ್‌ನ ವ್ಯಾನ್ ಬೀಕ್ ಬೌಲಿಂಗ್ ದಾಳಿಗೆ ಮೊದಲ ಬಲಿಯಾದರು. ಫಖರ್ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಇಮಾಮ್-ಉಲ್-ಹಕ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. ನಾಯಕ ಬಾಬರ್ ಅಜಮ್ ಕೂಡ ಬಂದ ದಾರಿಯಲ್ಲಿಯೇ ಹೋದರು. 18 ಬಾಲ್ಗಳನ್ನು ಎದುರಿಸಿದ ಭರವಸೆಯ ಆಟಗಾರ, ಕೇವಲ 5 ರನ್ ಕೊಡುಗೆ ನೀಡಿ ಪಾಕ್ ಕ್ರೀಡಾಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದ ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ಜೊತೆಯಾಟ ತಂಡಕ್ಕೆ ಬಲ ನೀಡಿತು. 75 ಬಾಲ್ಗಳನ್ನು ಎದುರಿಸಿದ ಮೊಹಮ್ಮದ್ ರಿಜ್ವಾನ್ 8 ಬೌಂಡರಿ ಸಹಿತ 68 ರನ್ ಕಲೆ ಹಾಕಿದರು. 52 ಬಾಲ್ ಎದುರಿಸಿದ ಸೌದ್ ಶಕೀಲ್ 1 ಸಿಕ್ಸ್ ಹಾಗೂ 9 ಬೌಂಡರಿಗಳೊಂದಿಗೆ 68 ರನ್ ಕೊಡುಗೆಯಾಗಿ ನೀಡಿದರು. ಉತ್ತಮ ಇನ್ನಿಂಗ್ಸ್ ಕಟ್ಟುತ್ತಿದ್ದ ಈ ಜೋಡಿ ಔಟಾದ ಬೆನ್ನಲ್ಲೇ ಪಾಕ್ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಮೊಹಮ್ಮದ್ ನವಾಜ್ 39, ಶಾದಾಬ್ ಖಾನ್ 32 ರನ್ಗಳ ಹೊರತು ಉಳಿದ ಆಟಗಾರರಾದ ಇಫ್ತಿಕರ್ ಅಹ್ಮದ್ 9, ಹಸನ್ ಅಲಿ 0, ಶಾಹೀನ್ ಅಫ್ರಿದಿ ಔಟಾಗದೇ 13, ಹ್ಯಾರಿಸ್ ರೌಫ್ 16 ರನ್ ನೀಡಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ, ಪಾಕ್ 49 ಓವರ್ಗಳಲ್ಲಿ 286 ರನ್ಗಳಿಗೆ ಆಲೌಟ್ ಆಯಿತು.