September 16, 2026
Wednesday, September 16, 2026
spot_img

ರಾಜ್ಯ ಸ್ಥಾನಮಾನಕ್ಕೆ ಹೋರಾಟ ಮುಂದುವರಿಸಿ: ಲಡಾಖ್ ಜನರಿಗೆ ಸೋನಮ್ ವಾಂಗ್‌ಚುಕ್ ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಡಾಖ್ ಜನರು ರಾಜ್ಯ ಸ್ಥಾನಮಾನಕ್ಕಾಗಿ ಹೋರಾಟ ಮುಂದುವರಿಸಬೇಕು. ಶಾಂತಿ, ಏಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಬಂಧಿಸಲ್ಪಟ್ಟು ಜೋಧಪುರ ಜೈಲಿನಲ್ಲಿರುವ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಹೇಳಿದ್ದಾರೆ.

ಲಡಾಖ್‌ನಲ್ಲಿ ಸೆಪ್ಟೆಂಬರ್ 25ರಂದು ನಡೆದ ಪ್ರತಿಭಟನೆ ವೇಳೆ ಉಂಟಾದ ಹಿಂಸಾಚಾರದಿಂದ ನಾಲ್ವರು ಸಾವನ್ನಪ್ಪಿದ ಬಳಿಕ ಸೋನಮ್ ವಾಂಗ್‌ಚುಕ್ ಬಂಧನಕ್ಕೆ ಒಳಗಾಗಿದ್ದರು. ಇದೀಗ ಅವರು ಜೈಲಿನಲ್ಲಿ ಇದ್ದುಕೊಂಡೇ ಹೋರಾಟ ಮುಂದುವರಿಸುವಂತೆ ಲಡಾಖ್ ಜನರಿಗೆ ಕರೆ ನೀಡಿದ್ದಾರೆ.

ಶಾಂತಿ ಮತ್ತು ಏಕತೆಗಾಗಿ ಮನವಿ ಮಾಡಿದ್ದು, ಗಾಂಧಿಯವರ ಅಹಿಂಸೆಯ ಮಾರ್ಗದಲ್ಲಿ ರಾಜ್ಯ ಸ್ಥಾನಮಾನಕ್ಕೆ ಲಡಾಖ್ ಜನರು ತಮ್ಮ ಹೋರಾಟವನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಾಂಗ್‌ಚುಕ್ ಅವರ ಹಿರಿಯ ಸಹೋದರ ಕಾ ತ್ಸೆಟನ್ ಡೋರ್ಜೆ ಲೇ ಮತ್ತು ಅವರ ವಕೀಲ ಮುಸ್ತಫಾ ಹಾಜಿ ಜೋಧ್‌ಪುರ ಜೈಲಿನಲ್ಲಿ ಅವರನ್ನು ಭೇಟಿಯಾಗಿದ್ದು, ಈ ವೇಳೆ ಅವರು ಹೋರಾಟ ಮುಂದುವರಿಸಲು ಕರೆ ನೀಡಿದ್ದಾರೆ.

ದೈಹಿಕ ಮತ್ತು ಮಾನಸಿಕವಾಗಿ ನಾನು ಚೆನ್ನಾಗಿದ್ದೇನೆ. ಎಲ್ಲರ ಕಾಳಜಿ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಮತ್ತು ಬಂಧಿಸಲ್ಪಟ್ಟ ಜನರಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದಿರುವ ಅವರು, ನಾಲ್ವರ ಹತ್ಯೆಯ ಬಗ್ಗೆ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಬೇಕು. ಇದಕ್ಕಾಗಿ ನಾನು ಜೈಲಿನಲ್ಲಿಯೇ ಇರಲು ಸಿದ್ಧ ಎಂದು ತಿಳಿಸಿದ್ದಾರೆ.

ಲಡಾಖ್ ಜನರೊಂದಿಗೆ ಇದಕ್ಕಾಗಿ ದೃಢವಾಗಿ ನಿಲ್ಲುತ್ತೇನೆ. ಜನರು ಶಾಂತಿ ಮತ್ತು ಏಕತೆಯನ್ನು ಕಾಪಾಡಿಕೊಂಡು ಹೋರಾಟವನ್ನು ಮುಂದುವರಿಸಬೇಕು ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !