ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀದರ್ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಜ. 4 ರಂದು ಪ್ರತಿಭಟನೆ ನಡೆಸಲಿದೆ.
ಗುತ್ತಿಗೆದಾರನ ಆತ್ಮಹತ್ಯೆಗೂ, ಖರ್ಗೆ ಅವರ ಕಚೇರಿಗೂ ಸಂಬಂಧವಿದೆ ಎಂದು ಬಿಜೆಪಿ ಆರೋಪಿಸಿದ್ದು, ಸಚಿವರ ತವರು ಜಿಲ್ಲೆ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲಿದೆ. ಈ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ನಾನು ಅವರನ್ನು ಸ್ವಾಗತಿಸುತ್ತೇನೆ, ಅವರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆ. ಅವರು ಸರಿಯಾಗಿ ನಡೆದುಕೊಂಡರೆ ನೀರು ಮತ್ತು ಎಳನೀರು ನೀಡುತ್ತೇವೆ. ಅನುಚಿತವಾಗಿ ವರ್ತಿಸಿದರೆ ಜೈಲಿಗೆ ಕಳುಹಿಸುತ್ತೇವೆ. ಪ್ರತಿಭಟನಾಕಾರರು ಹೇಗೆ ವರ್ತಿಸುತ್ತಾರೆ ಎಂಬುದರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಬಿಜೆಪಿಯ ಕಾರ್ಯವೈಖರಿಯನ್ನು ಟೀಕಿಸಿದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ್, ಬಿಜೆಪಿಗೆ ಬೇರೆ ಕೆಲಸವಿಲ್ಲ. ಪ್ರತಿಪಕ್ಷವಾಗಿ ಸಾರ್ವಜನಿಕ ಸಮಸ್ಯೆಗಳನ್ನು ಎತ್ತಿ ಹಿಡಿಯುವಲ್ಲಿ ವಿಫಲರಾಗಿದೆ. ಬಿಜೆಪಿಯ ತಪ್ಪುಗಳನ್ನು ಎತ್ತಿ ತೋರಿಸಿದ್ದಕ್ಕೆ ಪ್ರಿಯಾಂಕ್ ಖರ್ಗೆ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಖರ್ಗೆಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಪ್ರತಿಭಟನೆ ಮಾಡಬಹುದು ಎಂದಿದ್ದಾರೆ.