ಮಧ್ಯಪ್ರದೇಶದ ಕ್ರೈಸ್ತ ಮಿಶನರಿಗಳ ಹಾಸ್ಟೆಲ್ಲಿನಲ್ಲಿ ಮತಾಂತರ – ದಾಖಲಾಯ್ತು ದೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ದಾಮೋಹ್‌ನಲ್ಲಿರುವ ಕ್ರೈಸ್ತ ಮಿಶನರಿಗಳ ಹಾಸ್ಟೆಲ್‌ನಲ್ಲಿ ಮತಾಂತರ ನಡೆಯುತ್ತಿದೆ. ಹೀಗಂತ ಆರೋಪ ಬಂದಿರುವುದು ಮತ್ಯಾರಿಂದಲೂ ಅಲ್ಲ. ಭಾನುವಾರ ಆ ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್ ಸಿ ಪಿ ಸಿಆರ್) ಪ್ರಿಯಾಂಕ್ ಕಾನೂಂಗೊ ಅವರಿಂದ. ಈ ಸಂಬಂಧ 10 ವ್ಯಕ್ತಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಮಿಶನರಿಗಳು ನಡೆಸುತ್ತಿದ್ದ ಅನಾಥಾಶ್ರಮ ಹಾಗೂ ಹಾಸ್ಟೆಲ್‌ಗೆ ಕಾನೂಂಗೊ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಗಳಿಗೆ ಹೊರತುಪಡಿಸಿ ಇನ್ಯಾರಿಗೂ ಕನೂಂಗೊ ಅವರ ಆಗಮನದ ಬಗ್ಗೆ ಮಾಹಿತಿ ನೀಡಿರಲಿಲ್ಲ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಓಂಕಾರ್ ಸಿಂಗ್ ಮರ್ಕಾಮ್ ಜತೆ ಕನೂಂಗೊ ಅವರು ಹಾಸ್ಟೆಲ್‌ಗೆ ಭೇಟಿ ನೀಡಿದ್ದು, ಹಾಸ್ಟೆಲ್ ಗೇಟ್ ತೆಗೆಯಲು ಸಾಕಷ್ಟು ತಡ ಮಾಡಿದರು. ಉನ್ನತ ಅಧಿಕಾರಿಗಳು ಇದ್ದರೂ ಹಾಸ್ಟೆಲ್ ಗೇಟ್ ತೆಗೆಯಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಮಕ್ಕಳ ಮತಾಂತರ ನಡೆಯುತ್ತಿದೆ. ದಿಂಢೋರಿಯಿಂದ ಬಂದ ಬಾಲಕನೊಬ್ಬನನ್ನು ಕ್ರೈಸ್ತ ಪುರೋಹಿತನನ್ನಾಗಿಸಲು ತರಬೇತಿ ನೀಡುತ್ತಿದ್ದರು ಎಂದು ಕನೂಂಗೊ ಹೇಳಿದ್ದಾರೆ.

ದೇಹತ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸುದೀರ್ಘ ಕಾಯುವಿಕೆಯ ನಂತರ ಎಫ್‌ಐಆರ್ ದಾಖಲಿಸಲಾಯಿತು. ಈ ದಿಢೀರ್ ಭೇಟಿ ಬಗ್ಗೆ ಇಲಾಖೆಯ ಅಧಿಕಾರಿಗಳನ್ನು ಹೊರತುಪಡಿಸಿ ಇನ್ಯಾರಿಗೂ ಮಾಹಿತಿ ಇರಲಿಲ್ಲ. ಆದರೆ ಅಧಿಕಾರಿಗಳಿಗೆ ಪದೇ ಪದೆ ಫೋನ್ ಬರುತ್ತಿದ್ದದ್ದನ್ನು ಗಮನಿಸಿದ್ದೇನೆ ಎಂದು ಕನೂಂಗೊ ಹೇಳಿದ್ದಾರೆ.

ಇಲ್ಲಿ ಮಕ್ಕಳ ಧಾರ್ಮಿಕ ಸ್ವಾತಂತ್ರ್ಯದ ಹರಣವಾಗಿದೆ. 10 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಪ್ರಿಯಾಂಕ್ ಕನೂಂಗೊ ಹೇಳಿದ್ದಾರೆ.

ಹಾಸ್ಟೆಲ್‌ನ ಪ್ರಾಂಶುಪಾಲರಾದ ತ್ರೀಝಾ ಮಾತನಾಡಿ, ಇದು ಸುಳ್ಳು ಆರೋಪ. ಮಕ್ಕಳಿಗೆ ಇಂಥದ್ದೇ ಧರ್ಮ ಪಾಲಿಸಿ ಎಂದು ನಾವು ಒತ್ತಡ ಹೇರಿಲ್ಲ. ಹಿಂದೂ ಹಾಗೂ ಮುಸ್ಲಿಂ ಮಕ್ಕಳು ಅವರವರ ಧರ್ಮ ಪಾಲನೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!