ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತವು ತನಿಖೆಗೆ ಸಹಕರಿಸಬೇಕು, ಈ ಬಗ್ಗೆ ಹಲವು ಬಾರಿ ಭಾರತಕ್ಕೆ ಒತ್ತಾಯ ಮಾಡಿದ್ದೇವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ತಿಳಿಸಿದ್ದಾರೆ.
ನಾನು ಮತ್ತೆ ಈ ವಿಚಾರವನ್ನು ಪುನರುಚ್ಛರಿಸುತ್ತಿದ್ದೇನೆ. ನಾವು ನಮ್ಮ ಕೆನಡಾ ಸಹೋದ್ಯೋಗಿಗಳ ಜತೆ ನಿಕಟ ಸಮನ್ವಯದಲ್ಲಿದ್ದೇವೆ. ನಿಜ್ಜರ್ ಸಾವಿನ ಬಗ್ಗೆ ತನಿಖೆ ಆಗಬೇಕಾದರೆ ಭಾರತ ಸಂಪೂರ್ಣವಾಗಿ ಸಹಕರಿಸಬೇಕು. ಈ ಬಗ್ಗೆ ಸಾಕಷ್ಟು ಸನ್ನಿವೇಶಗಳಲ್ಲಿ ತಿಳಿಸುತ್ತಲೇ ಇದ್ದೇವೆ ಎಂದಿದ್ದಾರೆ.
ನಾನು ಅಮೆರಿಕ ಸರ್ಕಾರದ ಪರವಾಗಿ ಮಾತನಾಡುತ್ತಿದ್ದೇನೆ, ಭಾರತವೂ ಅವರ ಸರ್ಕಾರದ ಪರವಾಗಿಯೇ ಮಾತನಾಡಲಿ, ಆದರೆ ತನಿಖೆ ನಡೆಸಲು ಸಹಕಾರ ನೀಡಬೇಕು ಎಂದಿದ್ದಾರೆ.
ಇತ್ತೀಚೆಗಷ್ಟೇ ವಿದೇಶಾಂಗ ಸಚಿವ ಎಸ್. ಜೈಶಂಕರ್ ವಾಷಿಂಗ್ಟನ್‌ನಲ್ಲಿ ಆಂಟೊನಿ ಬ್ಲಿಂಕೆನ್ ಅವರ ಜೊತೆ ಮಾತುಕತೆ ನಡೆಸಿದ್ದು, ಕೆನಡಾದ ಆರೋಪಗಳಿಗೆ ಸಂಬಂಧಿಸಿದಂತೆ ಮಾಹಿತಿ ಪರಿಶೀಲನೆಗೆ ಭಾರತ ಸಿದ್ಧವಾಗಿದೆ. ಭಾರತ ಹಾಗೂ ಕೆನಡಾ ಸರ್ಕಾರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದಿದ್ದರು.