ಹೊಸದಿಗಂತ ಡಿಜಿಟಲ್ ಡೆಸ್ಕ್:
ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಲ್ಲಾ ಇಲಾಖೆಗಳ ನಡುವೆ ಸಮನ್ವಯ ಅತ್ಯಗತ್ಯವಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಪರಿಸರ ಶಿಕ್ಷಣ ಕೇಂದ್ರ (ಸಿಇಇ) ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಜರ್ಮನ್ ಫೌಂಡೇಶನ್ ಹ್ಯಾನ್ಸ್ ಸೀಡೆಲ್ ಸ್ಟಿಫ್ಟಂಗ್ ಸಹಯೋಗದಲ್ಲಿ ಆಯೋಜಿಸಲಾಗಿರುವ 2 ದಿನಗಳ ರಾಜ್ಯ ಹವಾಮಾನ ಕ್ರಮ ಮತ್ತು ಮೇಲ್ವಿಚಾರಣೆ ಕುರಿತ ನೀತಿ ಸಂವಾದಕ್ಕೆ ಸಚಿವ ಈಶ್ವರ್ ಖಂಡ್ರೆಯವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಇಂದು ವಿಶ್ವಕ್ಕೇ ಸವಾಲಾಗಿದ್ದು, ಇದರ ಪರಿಣಾಮ ಎದುರಿಸಲು ಮತ್ತು ಪರಿಸರದ ಉಳಿವಿಗಾಗಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು ಅತ್ಯಗತ್ಯವಿದೆ ಎಂದು ಹೇಳಿದರು.
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸಲು ಮಾರ್ಗಗಳನ್ನು ಕಂಡುಕೊಳ್ಳಲು ಸಂಶೋಧನೆಯನ್ನು ಕೈಗೊಳ್ಳುವ ಏಜೆನ್ಸಿಗಳೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು ಈ ಸಮಸ್ಯೆಗಳನ್ನು ದೂರಾಗಿಸಲು ಕಂಡುಕೊಂಡ ಪರಿಹಾರವನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಜೂನ್ 2008 ರಲ್ಲಿ ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆ ಯನ್ನು ಬಿಡುಗಡೆ ಮಾಡಿತ್ತು. ಹವಾಮಾನ “ಸಹ-ಪ್ರಯೋಜನಗಳೊಂದಿಗೆ” ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಸೂಕ್ತವಾದ ದೀರ್ಘಕಾಲೀನ ಕ್ರಮಗಳಿಗಾಗಿ ನೀತಿಗಳನ್ನು ರೂಪಿಸುವುದು ಅಗತ್ಯವಾಗಿದೆ.