ಬೃಹತ್ ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು: 14,190 ಸಂತ್ರಸ್ತೆಯರ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೇಶದ ವಿವಿಧ ಭಾಗಗಳ 14,190 ಸಂತ್ರಸ್ತೆಯರನ್ನು ಒಳಗೊಂಡು ನಡೆಸಲಾಗುತ್ತಿದ್ದ ಕುಖ್ಯಾತ, ಸಂಘಟಿತ ವೇಶ್ಯಾವಾಟಿಕೆ ಗ್ಯಾಂಗ್ ಅನ್ನು ಹೈದರಾಬಾದ್‌ನ ಸೈಬರಾಬಾದ್ ಪೊಲೀಸರು ಭೇದಿಸಿದ್ದಾರೆ.
ಈ ಗ್ಯಾಂಗ್‌ ನ 17 ಜನರನ್ನು ಬಂಧಿಸಲಾಗಿದ್ದು ಹಲವಾರು ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಈ ಗ್ಯಾಂಗ್ ಮಾದಕ ದ್ರವ್ಯಗಳ ಬಳಕೆ ಮತ್ತು ಇತರ ಅಪರಾಧ ಕೃತ್ಯಗಳಲ್ಲಿಯೂ ಸಕ್ರಿಯವಾಗಿ ತೊಡಗಿರುವ ಮಾಹಿತಿ ಲಭಿಸಿದೆ.
ಭಾರತದಾದ್ಯಂತ ವಿವಿಧ ಸ್ಥಳಗಳಿಂದ, ಮುಖ್ಯವಾಗಿ ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಿಂದ ಯುವತಿಯರು ಹಾಗೂ ಮಹಿಳೆಯರನ್ನು ಈ ಜಾಲಕ್ಕೆ ಸೇರಿಸಿಕೊಳ್ಳಲಾಗುತ್ತಿತ್ತು. ಆ ಬಳಿಕ ಹಲವು ವೆಬ್‌ಸೈಟ್‌ಗಳಲ್ಲಿ ವೇಶ್ಯಾವಾಟಿಕೆ ಜಾಹೀರಾತುಗಳನ್ನು ಪೋಸ್ಟ್ ಮಾಡಲಾಗುತ್ತಿತ್ತು.
ಕಾಲ್ ಸೆಂಟರ್‌ಗಳು ಮತ್ತು ವಾಟ್ಸಾಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಲಾಗುತ್ತಿತ್ತು. ಒಪ್ಪಿದ ಗ್ರಾಹಕರಿಗೆ ಹೋಟೆಲ್‌ಗಳ ಕೊಠಡಿಗಳಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಡಲಾಗುತ್ತಿತ್ತು.
ಈ ಕಾಲ್ ಸೆಂಟರ್‌ಗಳನ್ನು ನವದೆಹಲಿ, ಬೆಂಗಳೂರು, ಹೈದರಾಬಾದ್‌ನಿಂದ ನಿರ್ವಹಿಸಲಾಗುತ್ತಿತ್ತು. ಇದರ  ವಹಿವಾಟುಗಳು ನಗದು ಅಥವಾ ಫೋನ್‌ ಪೇ, ಪೇಟಿಎಂ ಇತ್ಯಾದಿ ಅಪ್ಲಿಕೇಶನ್‌ಗಳ ಮೂಲಕ ನಡೆಯುತ್ತಿತ್ತು.  ಈ ಜಾಲದ ಸಂತ್ರಸ್ಥೆಯರಿಗೆ ಬಂದ ಹಣದಲ್ಲಿ ಶೇ. 30 ನೀಡಿದರೆ, ಜಾಹೀರಾತಿಗೆ ಮತ್ತು ಕಾಲ್ ಸೆಂಟರ್ ಗಳಿಗೆ  ಶೇ.35 ಮತ್ತು ಗ್ಯಾಂಗ್‌ ಗೆ ಶೇ.35 ಹಣ ಹಂಚಿಕೆಯಾಗುತ್ತಿತ್ತು.
ಐಷಾರಾಮಿ ಜೀವನಶೈಲಿ, ಸುಲಭ ಹಣದ ಆಮಿಷವೊಡ್ಡುವ ಮೂಲಕ ಮತ್ತು ಕೆಲವು ಸಂದರ್ಭಗಳಲ್ಲಿ ಉದ್ಯೋಗ ನೀಡುವ ನೆಪದಲ್ಲಿ ಯುವತಿಯರನ್ನು ಈ ವೃತ್ತಿಗೆ ಎಳೆಯಲಾಗುತ್ತಿತ್ತು. ಮೊದಲು ಬ್ರೋಕರ್ ಯುವತಿಯನ್ನು ಸಂಪರ್ಕಿಸುತ್ತಿದ್ದ. ಆಕೆಯ ಫೋಟೋಗಳನ್ನು ಗ್ಯಾಂಗ್‌ ಹಿಡಿತದಲ್ಲಿದ್ದ ವಾಟ್ಸಾಪ್ ಗುಂಪುಗಳಲ್ಲಿ ಹಾಕುತ್ತಿದ್ದ. ವ್ಯವಹಾರ ಕೂಡಿಬಂದ ಯುವತಿಯರು ಹಾಗೂ ಗಿರಾಕಿಗಳಿಗೆ ಹೋಟೆಲ್ ಮತ್ತು ವಿಮಾನ ಟಿಕೆಟ್‌ಗಳನ್ನು ಬುಕ್‌ ಮಾಡುತ್ತಿದ್ದರು.
ಮೊಹಮ್ಮದ್ ಅದೀಮ್, ಮೊಹಮ್ಮದ್ ಸಮೀರ್, ಹರ್ಭಿಂದರ್ ಕೌರ್, ಮೊಹಮ್ಮದ್ ಸಲ್ಮಾನ್ ಖಾನ್, ಮೊಹಮ್ಮದ್ ಅಬ್ದುಲ್ ಕರೀಂ, ಯರಸಾನಿ ಜೋಗೇಶ್ವರ್ ರಾವ್ ಸೇರಿದಂತೆ 17 ಅಪರಾಧಿಗಳನ್ನು ಪೊಲೀಸರು ಕಳೆದ ಕೆಲವು ವಾರಗಳಲ್ಲಿ ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಮಂಗಳವಾರ ನಗರದ ಪ್ರಸಿದ್ಧ ಸ್ಟಾರ್ ಹೊಟೇಲ್‌ನ ಮ್ಯಾನೇಜರ್ ರಾಕೇಶ್ ಎಂಬಾತನನ್ನೂ ಬಂಧಿಸಲಾಗಿದೆ.
ಅಪರಾಧಿಗಳಿಂದ 34 ಸ್ಮಾರ್ಟ್‌ಫೋನ್‌ಗಳು, ಮೂರು ಕಾರುಗಳು, ಒಂದು ಲ್ಯಾಪ್‌ಟಾಪ್ ಮತ್ತು 2.5 ಗ್ರಾಂ ಎಂಡಿಎಂಎಯನ್ನು ಸೈಬರಾಬಾದ್ ಪೊಲೀಸರ ಮಾನವ ಕಳ್ಳಸಾಗಣೆ ತಡೆ ಘಟಕ ವಶಪಡಿಸಿಕೊಂಡಿದೆ.
ಕಳ್ಳಸಾಗಣೆಗೊಳಗಾದ ಮಹಿಳೆಯರಲ್ಲಿ ಸುಮಾರು 50 ಪ್ರತಿಶತ ಪಶ್ಚಿಮ ಬಂಗಾಳದವರಾದರೆ, 20% ಕರ್ನಾಟಕದಿಂದ, 15% ದೆಹಲಿಯಿಂದ, 7% ದೆಹಲಿಯಿಂದ, 5% ಇತರ ರಾಜ್ಯಗಳವರಾಗಿದ್ದಾರೆ. ಬಾಂಗ್ಲಾದೇಶ, ನೇಪಾಳ, ಥೈಲ್ಯಾಂಡ್, ಉಜ್ಬೇಕಿಸ್ತಾನ್, ರಷ್ಯಾ ಮತ್ತಿತರ ದೇಶಗಳ ಹುಡುಗಿಯರು ಈ ಜಾಲದಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!