ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಮಿಕ್ರಾನ್, ಕೊರೋನಾ ಹೆಚ್ಚಳದಿಂದಾಗಿ ರಾಜ್ಯಕ್ಕೆ ಮತ್ತೆ ವೀಕೆಂಡ್ ಕರ್ಫ್ಯೂ ಬಿಸಿ ತಟ್ಟಿದೆ.
ನಿನ್ನೆ ರಾತ್ರಿಯಿಂದಲೇ ಪೊಲೀಸರು ಫೀಲ್ಡ್‌ಗಿಳಿದಿದ್ದು, ವಾಹನಗಳ ತಪಾಸಣೆಗೆ ಮುಂದಾಗಿದ್ದಾರೆ.
ಬೆಂಗಳೂರಿನ ಹಲವು ನಗರಗಳ ರಸ್ತೆಯಲ್ಲಿ ಈಗಾಗಲೇ ಬ್ಯಾರಿಕೇಡ್ ಬಿದ್ದಿದೆ. ಅನಗತ್ಯವಾಗಿ ರಸ್ತೆಗೆ ಬರುವ ಜನರ ವಿಚಾರಣೆ ಮಾಡಲಾಗುತ್ತಿದೆ. ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಖಾಲಿ ಖಾಲಿಯಾಗಿದೆ.
ರಾಜ್ಯದ ಕೆಲವು ನಗರಗಳಲ್ಲಿ ವೀಕೆಂಡ್ ಕರ್ಫ್ಯೂಗೆ ಬೆಲೆಕೊಡದೆ ಜನ ತಮ್ಮ ಪಾಡಿಗೆ ತಾವು ಓಡಾಡಿಕೊಂಡಿದ್ದಾರೆ. ಮೈಸೂರಿನ ದೊಡ್ಡ ಕೆರೆ ಕ್ರೀಡಾಂಗಣದಲ್ಲಿ ಯುವಕರು ಕರ್ಫ್ಯೂ ಮರೆತು ಕ್ರಿಕೆಟ್ ಆಡುತ್ತಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಎಚ್ಚರಿಕೆ ನೀಡಿ ಎಲ್ಲರನ್ನು ಮನೆಗೆ ಕಳಿಸಿದ್ದಾರೆ. ಕೊಪ್ಪಳದಲ್ಲಿ ವೀಕೆಂಡ್ ಕರ್ಫ್ಯೂ ಬಗ್ಗೆ ತಲೆಕೆಡಿಸಿಕೊಳ್ಳದ ಜನ ಸಾಮೂಹಿಕವಾಗಿ ನಿಂತು ಟೀ ಸೇವಿಸುತ್ತಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಬಿಎಂಟಿಸಿ ಓಡಾಟ ದೈನಂತಿನಂತೆ ಇರೋದಿಲ್ಲ. ಶೇ.10ರಷ್ಟು ಬಸ್‌ಗಳು ಮಾತ್ರ ರಸ್ತೆಗಿಳಿಯಲಿವೆ. ಕರ್ಫ್ಯೂ ಸಮಯದಲ್ಲಿ ಓಡಾಟ ನಡೆಸಲು ಅನುಮತಿ ಇರುವವರು ಬಸ್‌ಗಾಗಿ ಕಾಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿವೆ.
ಅಂತಾರಾಜ್ಯ ಬಸ್ ಓಡಾಟಕ್ಕೆ ನಿರ್ಬಂಧ ಇಲ್ಲ. ಆದರೆ ಗೋವಾ, ಕೇರಳಾ ಹಾಗೂ ಮಹಾರಾಷ್ಟ್ರದಿಂದ ಬರುವವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಹೊರರಾಜ್ಯದಿಂದ ಆಗಮಿಸುವ ಪ್ರಯಾಣಿಕರ ಬಳಿ ಆರ್‌ಟಿಪಿಸಿಆರ್ ವರದಿ ಇರುವುದು ಕಡ್ಡಾಯ. ಇಲ್ಲವಾದರೆ ಬಸ್‌ಗೆ ಪ್ರವೇಶ ಇರುವುದಿಲ್ಲ. ಮೆಟ್ರೋ ಸಂಚಾರ ಎಂದಿನಂತೆ ಇದ್ದು, 20 ನಿಮಿಷಕ್ಕೊಂದು ಮೆಟ್ರೋ ಬರಲಿದೆ. ಬೆಳಗ್ಗೆ 8 ರಿಂದ ರಾತ್ರಿ 9 ರವರೆಗೆ ಮಾತ್ರ ಮೆಟ್ರೋ ಸೇವೆ ಲಭ್ಯವಿರಲಿದೆ.