ಹಂಪಿ ಸಮೀಪದ ಹೊಟೇಲ್ ಆರೆಂಜ್ ಕೌಂಟಿಯಲ್ಲಿ 18 ಮಂದಿಗೆ ಕೊರೋನಾ: ಸಂಪೂರ್ಣ ಸೀಲ್ ಡೌನ್

ಹೊಸದಿಗಂತ ವರದಿ,ವಿಜಯನಗರ:

ವಿಶ್ವ ಪ್ರಸಿದ್ಧ ಹಂಪಿ ಸಮೀಪದ ಆರೆಂಜ್ ಕೌಂಟಿ(ಎವಲ್ವೋ ಬ್ಯಾಕ್) ಹೋಟೆಲ್ ನಲ್ಲಿ 18 ಪ್ರಕರಣ ಸೇರಿದಂತೆ ಒಟ್ಟು 28 ಪ್ರಕರಣಗಳು ಗುರುವಾರ ವರದಿಯಾದ ಹಿನ್ನೆಲೆ, ಹೋಟಲ್ ನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ‌ಮಾತನಾಡಿದ ಅವರು, ಸದ್ಯ ಕಂಟೋನ್ಮೆಂಟ್ ಝೋನ್ ಮಾಡಲಾಗಿದ್ದು, ಬಹಳ ಎಚ್ಚರಿಕೆಯಿಂದ ಮಾನಿಟರ್ ಮಾಡಲಾಗುತ್ತಿದೆ ಎಂದರು.
ವೈಕುಂಠ ಏಕದಾಶಿ ಮತ್ತು ಮಕರ ಸಂಕ್ರಾಂತಿ ಹಿನ್ನೆಲೆ ಹಂಪಿಯಲ್ಲಿ ಹೆಚ್ಚಿನ ಜನರು ಸೇರುತ್ತಾರೆ ಎನ್ನುವ ಕಾರಣಕ್ಕಾಗಿ ಜ.13ರಿಂದ 17ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಂಪಿಯಲ್ಲಿರುವ ಯಾವುದೇ ಸ್ಮಾರಕಗಳು ಒಪನ್ ಮಾಡದಂತೆ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಶಾಲಾ ಮಕ್ಕಳಲ್ಲಿ ವ್ಯಾಪಕವಾಗಿ ಕೋವಿಡ್ ಪ್ರಕರಣಗಳು ಬಂದಿರುವುದು ವರದಿಯಾಗಿಲ್ಲ; ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಲೆಗಳನ್ನು ಬಂದ್ ಮಾಡುವ ಪ್ರಮೇಯ ಉದ್ಭವಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಜಿಲ್ಲೆಯಲ್ಲಿ ಆಕ್ಸಿಜನ್ ಸಮರ್ಪಕ ಸಂಗ್ರಹ: ಕೋವಿಡ್ ಸೊಂಕಿತರ ಚಿಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲೆಯಲ್ಲಿ ಸಮರ್ಪಕ ಪ್ರಮಾಣದಲ್ಲಿ ಆಕ್ಸಿಜನ್ ಸಂಗ್ರಹಿಸಿಡಲಾಗಿದೆ, ಇನ್ನೂ ಆಕ್ಸಿಜನ್ ಪ್ರಮಾಣ ಹೆಚ್ಚಿಸುವುದರ ಜೊತೆಗೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ,ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಬೆಡ್‍ಗಳ ಸಂಖ್ಯೆಯನ್ನು ಸಹ ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದರು.
ಸೊಂಕಿತರ ಮನೆಗೆ ಪೋಸ್ಟರ್‍ಗಳನ್ನು ಲಗತ್ತಿಸಲಾಗುತ್ತಿದೆ;ಅವರು ಹೊರಗಡೆ ಓಡಾಡಬಾರದು ಮತ್ತು ಸುತ್ತಮುತ್ತಲಿನವರಿಗೂ ಆ ಕಡೆ ಸುಳಿಯಬಾರದು.
ಹೋಂ ಐಸೋಲೇಶನ್ ಒಳಗಾಗುವವರಿಗೆ ಆರೋಗ್ಯ ಕಿಟ್ ನೀಡಲಾಗುತ್ತಿದೆ, ಈಗಾಗಲೇ ರಚಿಸಲಾಗಿರುವ ಆರ್‍ಆರ್‍ಟಿ ತಂಡಗಳು ಸೊಂಕಿತರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸುತ್ತಿವೆ ಮತ್ತು ಆರೋಗ್ಯ ಏರುಪೇರು ಆದಲ್ಲಿ ಆಸ್ಪತ್ರೆಗೆ ದಾಖಲಿಸಲು ಕ್ರಮವಹಿಸಲಾಗುತ್ತಿದೆ ಎಂದರು.
ಗ್ರಾ.ಪಂ. ಮಟ್ಟದಲ್ಲಿ ರಚಿಸಲಾಗಿರುವ ಕಾರ್ಯಪಡೆಗಳು ವಾರಂತ್ಯ ಕಫ್ರ್ಯೂ ಜಾರಿ,ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವಿಕೆ ಸೇರಿದಂತೆ ಇನ್ನೀತರ ಕೋವಿಡ್ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ
ಡಿಎಚ್‍ಒ ಡಾ.ಜನಾರ್ಧನ್ ಅವರು ಇದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!