ಕೆಲಸದಿಂದ ವಜಾಗೊಂಡಿರುವ ಕೊರೋನಾ ವಾರಿಯರ್‌ಗಳನ್ನು ಮತ್ತೆ ನಿಯೋಜಿಸಲು ಒತ್ತಾಯ

ಮೈಸೂರು: ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆಂದು ನೇಮಕ ಮಾಡಿಕೊಂಡಿದ್ದ ಕೊರೋನಾ ವಾರಿಯರ್‌ಗಳನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ, ಮಂಗಳವಾರ ನಗರದಲ್ಲಿ ಕರ್ನಾಟಕ ಸಂಯುಕ್ತ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ಧರಣಿ ನಡೆಸಿ, ನಾನಾ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೊರೋನಾ ಸೋಂಕು ಹರಡುವಿಕೆಯ ವೇಳೆ, ಅದರ ನಿಯಂತ್ರಣ ಮಾಡಲೆಂದು ವೈದ್ಯರು, ನರ್ಸ್, ಲ್ಯಾಬ್ ಟೆಕ್ನಿಷಿಯನ್, ಸ್ವಾಬ್ ಕಲೆಕ್ಷನ್ ಮುಂತಾದ ಕೆಲಸಗಳಿಗೆ ಕೊರೋನಾ ವಾರಿಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಸುಮಾರು ೬ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಗೊಂಡಿದ್ದ ಕೊರೋನಾ ವಾರಿಯರ್‌ಗಳು ತಮ್ಮ ಜೀವದ ಹಂಗನ್ನು ತೊರೆದು ಹಗಲಿರುಳು ಸೋಂಕಿತರ ಸೇವೆ ನಡೆಸಿ, ಅವರು ಗುಣಮುಖರಾಗಲು ಕಾರಣರಾಗಿ, ಅವರ ಜೀವ ಉಳಿಸಿದ್ದರು. ಅಲ್ಲದೇ ಸೋಂಕು ಮತ್ತಷ್ಟು ಹರಡುವನ್ನು ತಡೆಗಟ್ಟಲು ಶ್ರಮಿಸಿದ್ದರು.

ಆದರೆ ಈಗ ರಾಜ್ಯದಲ್ಲಿ ಕೊರೋನಾ ಸೋಂಕು ತೀವ್ರವಾಗಿ ಇಳಿದಿದ್ದು, ನಿಯಂತ್ರಣದಲ್ಲಿದೆ ಎಂಬ ನೆಪವೊಡ್ಡಿ, ಕೊರೋನಾ ವಾರಿಯರ್‌ಗಳನ್ನು ಕೆಲಸದಿಂದ ವಜಾ ಮಾಡಿರುವುದು ಖಂಡನೀಯ. ವಜಾ ಮಾಡಿರುವವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು, ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಪುನೀತ್ ರಾಜ್ ಸೇರಿದಂತೆ ಹಲವಾರು ಮುಖಂಡರುಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!