ಹೊಸದಿಗಂತ ವರದಿ, ಬಳ್ಳಾರಿ:
ಕೊರೋನಾ ಓಡಿಸಲು ಒಂದೇ ರಾಮಬಾಣ ಲಸಿಕೆ ಮಾತ್ರ. ಕೋವಿಡ್ ಸೋಂಕು ರೂಪಾಂತರಗೊಂಡು ಜನರಿಗೆ ಕಂಟಕವಾಗುತ್ತಿದೆ. ಹೀಗಾಗಿ ಎಲ್ಲರು ಸೋಂಕಿನಿಂದ ತಪ್ಪಿಸಿಕೊಳ್ಳಲು ಲಸಿಕೆ ಪಡೆಯುವುದು ಅತ್ಯವಶ್ಯಕ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ 15 ರಿಂದ 18 ವರ್ಷದ ವಿಧ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ನರೇಂದ್ರ ಮೋದಿ ಜೀ ಅವರ ಕನಸಿನ ಭಾರತ ನಿರ್ಮಾಣವಾಗಲು ಮಕ್ಕಳಿಗೆ ಅವರವರ ಶಾಲೆಗಳಲ್ಲಿಯೇ ಕೋವ್ಯಾಕ್ಸಿನ್ ಲಸಿಕೆಯನ್ನು ಉಚಿತವಾಗಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಲಸಿಕೆಯ ಮೊದಲನೇ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್‍ನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದು ಅವರು ತಿಳಿಸಿದ್ದಾರೆ.
ವಿದೇಶಗಳು ನಮ್ಮ ದೇಶದತ್ತ ನೋಡುತ್ತಿದೆ ಎಂದರೆ ನಮ್ಮ ಭಾರತದ ಲಸಿಕೆ ಪರಿಣಾಮಕಾರಿ ಎಂದರ್ಥ. ಬೇರೆ ದೇಶದ ಜನರು ನಮ್ಮಲ್ಲಿ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಎಲ್ಲರು ಲಸಿಕೆ ಹಾಕಿಸಿಕೊಳ್ಳಬೇಕು. ಒಂದು ವೇಳೆ ಸೋಂಕು ತಗುಲಿದರು ಆಸ್ಪತ್ರೆಗೆ ದಾಖಲಾಗುವ ಆವಶ್ಯಕತೆ ಇಲ್ಲ. ನೀವು ವಿದ್ಯಾಭ್ಯಾಸ ಮಾಡಿ ಐಎಎಸ್, ಐಪಿಎಸ್ ಆಗಿ ದೇಶದ ಸೇವೆ ಮಾಡಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಮಾತನಾಡಿ, ಕೋವಿಡ್ ವಿರುದ್ದ ಗೆಲ್ಲಲು ಕರೊನಾ ನಿಯಮ ಪಾಲನೆ ಮತ್ತು ಕಡ್ಡಾಯ ಲಸಿಕೆ ಎಂಬುದು ಎರಡು ಅಸ್ತ್ರಗಳಿದ್ದಂತೆ, ಅದ್ದರಿಂದ ಎಲ್ಲರು ಲಸಿಕೆ ಹಾಕಿಸಿಕೊಂಡು ಕೋವಿಡ್ ನಿಯಮ ಪಾಲನೆ ಮಾಡುವುದರ ಜೊತೆಗೆ ನಿಮ್ಮ ಸುತ್ತಮುತ್ತಲಿನ ಸಾರ್ವಜನಿಕರಿಗೆ ಕೋವಿಡ್ ಬಗ್ಗೆ ತಿಳುವಳಿಕೆ ಮೂಡಿಸಬೇಕು ಎಂದರು. 15 ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಕಬ್ಬಿಣಾಂಶ ಕೊರತೆ ಇರುವುದು ಕಂಡುಬಂದಿರುತ್ತದೆ. ಆದ್ದರಿಂದ, ಎಲ್ಲ ಮಕ್ಕಳು ಜಂಕ್‍ಪುಡ್‍ನ್ನು ಸೇವಿಸದೇ ಆರೋಗ್ಯಕಾರವಾದ ಆಹಾರವನ್ನು ಸೇವಿಸಬೇಕು. ಲಸಿಕೆಯಿಂದ ಯಾರು ಭಯಪಡಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್, ಎಸಿ ಆಕಾಶ್ ಶಂಕರ್, ವಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರ್‍ಗೌಡ, ಜಿಲ್ಲಾ ಶಸ್ತ್ರಚಿಕಿತ್ಸಾಕ ಬಸರೆಡ್ಡಿ, ಟಿಎಚ್‍ಒ ಮೋಹನ್‍ಕುಮಾರಿ, ಡಿಡಿಪಿಯು ಎ.ರಾಜು, ಡಿಡಿಪಿಐ ಸಿ.ರಾಮಪ್ಪ, ಬಿಇಒ ಸಿದ್ಧಲಿಂಗಯ್ಯ, ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ವೀರಶೇಖರ ರೆಡ್ಡಿ ಇತರರು ಇದ್ದರು.