ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಮುಖ್ಯಮಂತ್ರಿಗಳ ಎದುರೇ ವೇದಿಕೆಯಲ್ಲಿ ರಾಜ್ಯದ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರ ಮೇಲೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಮತ್ತು ಅದೇ ಪಕ್ಷದ ವಿಧಾನ ಪರಿಷತ್ ಸದಸ್ಯ ಎಸ್.ರವಿ ಅವರು ಹಲ್ಲೆಗೆ ಮುಂದಾಗಿರುವುದು ಅತ್ಯಂತ ಖಂಡನೀಯ. ಕಾಂಗ್ರೆಸ್ ಪಕ್ಷದವರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಅವರದು ಗೂಂಡಾ ರಾಜಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.
ರಾಮನಗರದಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ನಿಗದಿಯಾಗಿತ್ತು. ಈ ಕಾರ್ಯಕ್ರಮದ ವೇದಿಕೆಯಲ್ಲೇ ಸಚಿವರ ಮೇಲೆ ಹಲ್ಲೆ ಮಾಡಲು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಮುಂದಾಗಿದ್ದು, ಮೈಕ್ ಕಿತ್ತೆಸೆದಿದ್ದಾರೆ. ಕಾಂಗ್ರೆಸ್ ಎಂಎಲ್‍ಸಿ ಎಸ್.ರವಿ ಅವರು ಡಿ.ಕೆ.ಸುರೇಶ್ ಅವರಿಗೆ ಬೆಂಬಲ ನೀಡಿದ್ದಾರೆ. ಇದಲ್ಲದೇ ಕಾಂಗ್ರೆಸ್ಸಿಗರು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುವ ಮಾದರಿಯಲ್ಲಿ ತಮ್ಮ ತೋಳ್ಬಲದ ರಾಜಕೀಯ ಪ್ರದರ್ಶಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಗೂಂಡಾ ಪ್ರವೃತ್ತಿಗೆ ಕೈಗನ್ನಡಿಯಂತಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಹಿಂದಿನಿಂದಲೇ ತೋಳ್ಬಲ ಮತ್ತು ಹಣಬಲದಿಂದ ತನ್ನ ಸಾಮರ್ಥ್ಯ ತೋರಿಸುತ್ತಿತ್ತು. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನಗಣ್ಯ ಸ್ಥಿತಿಗೆ ಬಂದಿದೆ. ಜನಪರ ಕಾರ್ಯಕ್ರಮಗಳನ್ನು ನೀಡಿದ ಪ್ರಧಾನಿಗಳಾದ ನರೇಂದ್ರ ಮೋದಿಯವರ ಅಭಿವೃದ್ಧಿಯ ಚಿಂತನೆ ಮತ್ತು ಅನುಷ್ಠಾನವನ್ನು ಗಮನಿಸಿ ಜನರು ದೇಶದೆಲ್ಲೆಡೆ ಬಿಜೆಪಿಯತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ರಾಜ್ಯದಲ್ಲಿ ಬಳಿಕ ನಡೆದ ವಿಧಾನಸಭಾ ಉಪ ಚುನಾವಣೆ, ಗ್ರಾಮ ಪಂಚಾಯತ್ ಚುನಾವಣೆಗಳಲ್ಲೂ ಜನರು ಕಾಂಗ್ರೆಸ್ಸಿಗರ ವಿರುದ್ಧ ಮತ್ತು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ. ಇಷ್ಟಾದರೂ ಕಾಂಗ್ರೆಸ್ ಪಕ್ಷದವರು ಬುದ್ಧಿ ಕಲಿತಿಲ್ಲ. ಕಾಂಗ್ರೆಸ್ಸಿಗರ ಈ ಮಾದರಿಯ ತೋಳ್ಬಲದ ಮತ್ತು ದರ್ಪದ ರಾಜಕಾರಣಕ್ಕೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.