ಹೊಸದಿಗಂತ ವರದಿ, ಮಡಿಕೇರಿ:
ಸೋಮವಾರಪೇಟೆ ಸಮೀಪದ ಮಲ್ಲಳ್ಳಿ ಜಲಪಾತದ ಬಳಿ ದೊರೆತ ಅಪರಿಚಿತ ಶವದ ಗುರುತು ಕೊನೆಗೂ ಪತ್ತೆಯಾಗಿದ್ದು, ಇದರೊಂದಿಗೆ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ.
ಮೃತನನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಶಶಿಕುಮಾರ್(29) ಎಂದು ಗುರುತಿಸಲಾಗಿದ್ದು, ಕಿರುಗಾವಲು ಪೊಲೀಸ್ ಠಾಣೆಯ ಅಧಿಕಾರಿಗಳು ಸೋಮವಾರಪೇಟೆ ಠಾಣೆಗೆ ಆಗಮಿಸಿ, ಪಟ್ಟಣದ ಠಾಣೆಯ ಸಿಪಿಐ ಮಹೇಶ್ ಅವರಿಂದ ಮಾಹಿತಿ ಪಡೆದು, ಮಲ್ಲಳ್ಳಿ ಗೆ ತೆರಳಿ ತನಿಖೆ ಕೈಗೊಂಡಿದ್ದಾರೆ.
ಮಾ.1ರಂದು ಮಲ್ಲಳ್ಳಿ ಗ್ರಾಮಸ್ಥರೊಬ್ಬರು ಅಪರಿತ ಶವದ ಮಾಹಿತಿಯನ್ನು ಪಟ್ಟಣದ ಪೊಲೀಸರಿಗೆ ನೀಡಿದ್ದರು. ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಕೊಳೆತ ಸ್ಥಿತಿಯಲ್ಲಿದ್ದ ಶವದ ಮಹಜರು ನಡೆಸಿ, ತನಿಖೆ ಕೈಗೊಂಡಿದ್ದರು.
ಮೃತದೇಹದ ಜರ್ಕಿನ್‍ನಲ್ಲಿ ಸಿಕ್ಕಿದ್ದ ಅಂಗಡಿಯ ವಿಳಾಸದ ಜಾಡು ಹಿಡಿದ ಸೋಮವಾರಪೇಟೆ ಪೋಲಿಸರು, ಮಂಡ್ಯ ಜಿಲ್ಲೆಯ ಠಾಣೆಗಳಿಗೆ ಮಾಹಿತಿ ನೀಡಿ, ಪ್ರಕರಣವನ್ನು ಬೇಧಿಸಿದ್ದಾರೆ.
ಪ್ರಕರಣಕ್ಕೆ ತಿರುವು: ಮೃತ ಶಶಿಕುಮಾರ್ ಮಳವಳ್ಳಿ ಪಟ್ಟಣದ ಸೋಡಮುದ್ದನ ಕೇರಿಯ ವಿದ್ಯಾರ್ಥಿನಿ ಯುಕ್ತಿ (18)ಯನ್ನು ಕೊಂದು ಜ.25ರಂದು ನಾಪತ್ತೆಯಾಗಿದ್ದಾಗಿ ಹೇಳಲಾಗಿದೆ.
ಮಾ.1ರಂದು ಮಲ್ಲಳ್ಳಿ ಜಲಪಾತದ ಸಮೀಪ ದೊರೆತ ಅಪರಿಚಿತ ಶವ ಶಶಿಕುಮಾರನದ್ದೆಂದು ಹೇಳಲಾಗಿದೆ.
ಜ.25 ರಂದು ಯುಕ್ತಿ ಕಾಲೇಜಿನಿಂದ ಮನೆಗೆ ವಾಪಾಸ್ಸು ಬಾರದ ಹಿನ್ನೆಲೆಯಲ್ಲಿ ಕಿರುಗಾವಲು ಠಾಣೆಯಲ್ಲಿ ಪೋಷಕರು ದೂರು ನೀಡಿದ್ದರು. ಫೆ.27ರಂದು ಪಟ್ಟಣದ ನೀಲಗಿರಿ ತೋಪಿನಲ್ಲಿ ಸುಟ್ಟಗಾಯದ ಯುವತಿಯ ಶವ ಪತ್ತೆಯಾಗಿತ್ತು. ಯುಕ್ತಿ ಧರಿಸಿದ್ದ ಓಲೆ, ಉಂಗುರ ಹಾಗೂ ಬ್ಯಾಗ್‍ನಲ್ಲಿದ್ದ ನೀರಿನ ಬಾಟಲಿಯ ಚಿತ್ರವನ್ನು ಯುಕ್ತಿಯ ತಾಯಿ ನೋಡಿ, ತಮ್ಮ ಮಗಳೆಂದು ಗುರತಿಸಿದ್ದರು.
ಯುಕ್ತಿಯನ್ನು ಬಲವಂತವಾಗಿ ಕರೆದೊಯ್ದಿರುವ ಶಶಿಕುಮಾರ್ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಯುಕ್ತಿಯ ಪೋಷಕರು ದೂರಿದ್ದಲ್ಲದೆ, ಪೊಲೀಸರ ಮೇಲೆ ಒತ್ತಡವನ್ನೂ ಹಾಕಿದ್ದರು.
ಇದಕ್ಕೆ ಪುಷ್ಠಿ ನೀಡುವಂತೆ ಶಶಿಕುಮಾರ್ ಅನುಮಾನಸ್ಪದವಾಗಿ ವಾಹನ ಹಾಗೂ ಬೈಕ್‍ನಲ್ಲಿ ಸಂಚರಿಸಿರುವ ಸಿ.ಸಿ. ಕ್ಯಾಮೆರಾದ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿ, ಶಶಿಕುಮಾರ್ ಪತ್ತೆಗೆ ಯತ್ನಿಸುತ್ತಿದ್ದರೆನ್ನಲಾಗಿದೆ.
ಸೋಮವಾರಪೇಟೆ ಪೋಲಿಸರು ನೀಡಿದ ಮಾಹಿತಿಯನ್ನು ಅಧರಿಸಿ, ಕಿರುಗಾವಲು ಠಾಣೆಯ ಅಧಿಕಾರಿಗಳು ಪ್ರಕರಣವನ್ನು ಬೇಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಶಶಿಕುಮಾರ್ ಮಲ್ಲಳ್ಳಿಗೆ ಬಂದು ಆತ್ಮಹತ್ಯೆ ಮಾಡಿಕೊಂಡನೇ ಆಥವಾ ಆತನನ್ನು ಯಾರಾದರೂ ಕೊಲೆ ಮಾಡಿ ಎಸೆದು ಪರಾರಿಯಾದರೇ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ.