86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ: ಇಲ್ಲಿವೆ ನೋಡಿ ಭಾಷೆಗಳ ರಾಣಿಯ ಅದ್ಭುತ ಸಂಗತಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹುಬ್ಬಳ್ಳಿ: ’ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯಿ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ್ ಪದವಾಡ್ತೀನಿ! ನನ್ನ್ ಮನಸ್ಸನ್ ನೀ ಕಾಣೆ! ಇದು ಕನ್ನಡದ ಕವಿ ಜಿ.ಪಿ. ರಾಜರತ್ನಂ ಅವರ ಸಾಲುಗಳು. ಇದು ಕೇವಲ ಪದ್ಯವಲ್ಲ ಬದಲಾಗಿ ಕೋಟ್ಯಂತರ ಕನ್ನಡ ಮನಸ್ಸುಗಳ ಅಭಿಲಾಷೆ. ಕನ್ನಡಿಗರಿಗೆ ಕನ್ನಡ ಕೇವಲ ಭಾಷೆಯಾಗಿಲ್ಲ ಮಾತೆಯಾಗಿದ್ದಾಳೆ. ಭಾರತಾಂಬೆಯ ಸುಪುತ್ರಿ ತಾಯಿ ಭುವನೇಶ್ವರಿಯನ್ನು ಅನುದಿನ ನೆನೆಯುವುದು ನಮ್ಮೆಲ್ಲರ ಆದಿ ಕಾರ್ಯ.

ಕನ್ನಡ ನಾಡು, ನುಡಿ, ಸಂಸ್ಕೃತಿ, ಭವ್ಯ ಪರಂಪರೆ ಜಗದಗಲ ಸಾರಲು ಪ್ರತಿ ವರ್ಷ ನಡೆಯುವ ಅಕ್ಷರಗಳ ಜಾತ್ರೆಯೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಈ ವರ್ಷದ 86ನೇ ಆವೃತ್ತಿ ಏಲಕ್ಕಿ ನಾಡು ಹಾವೇರಿಯಲ್ಲಿ ನಡೆಯುತ್ತಿದೆ. ಬನ್ನಿ ಈ ಕನ್ನಡ ಜಾತ್ರೆಯ ಹೊಸ್ತಿಲಲ್ಲಿ ಭಾಷೆಗಳ ರಾಣಿಯಾಗಿರುವ ಕನ್ನಡದ ವೈಶಿಷ್ಟ್ಯತೆಗಳನ್ನೊಮ್ಮೆ ನೋಡೋಣ.

ಅತ್ಯಂತ ಸರಳ ಹಾಗೂ ವೈಜ್ಞಾನಿಕ ಭಾಷೆ

ಕನ್ನಡ ಕೇಳಲು ಹಾಗೂ ಮಾತನಾಡಲು ಅತ್ಯಂತ ಸುಮಧುರ ಭಾಷೆಯಾಗಿದೆ. ಇದರ ಕಾಗುಣಿತ, ವಾಕ್ಯ ರಚನೆ, ಶಬ್ದ ವಿಂಗಡನೆ ಎಲ್ಲವೂ ವೈಜ್ಞಾನಿಕವಾಗಿದೆ. ಮನುಷ್ಯ ತನ್ನ ಭಾವನೆಗಳನ್ನು ಉತ್ತಮವಾಗಿ ಅಭಿವ್ಯಕ್ತಿಗೊಳಿಸಲು ಕನ್ನಡ ಭಾಷೆ ಹೇಳಿಮಾಡಿಸಿದಂತಿದೆ.

ಒಂದು ಭಾಷೆ ಅನೇಕ ಶೈಲಿ
’ನಿಮ್ಕಡಿ ಶಿರಾ ಅಂದ್ರೆ ತಲೆ ಅಂತ ತಿಳ್ಕೊಂತಿರಿ ನಮ್ಕಡಿ ಶಿರಾ ಅಂದ್ರೆ ಕೇಸರಿಬಾತ್ ಅನ್ಕೋತೀವಿ’ ಈ ಹಾಡಿನ ಸಾರವೇ ಹೇಳುತ್ತದೆ ಕನ್ನಡ ಕೇವಲ ಒಂದೇ ಅಲ್ಲ. ಧಾರವಾಡ, ಮಂಗಳೂರು, ಕಲಬುರಗಿ, ಮೈಸೂರು, ಶಿರಸಿ, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು, ಬೆಳಗಾವಿ ಹೀಗೆ ಜಿಲ್ಲೆ ಜಿಲ್ಲೆಗೆ ಕನ್ನಡದ ಶೈಲಿ ಭಿನ್ನವಾಗಿದೆ. ಜಿಲ್ಲೆಯಿಂದ ಜಿಲ್ಲೆಗೆ ಭಾಷೆ ಆಡುವ ಶೈಲಿ, ಪದಗಳ ಬಳಕೆ, ಉಚ್ಛಾರಣೆ ವ್ಯತ್ಯಾಸವಾಗುತ್ತದೆ. ದಕ್ಷಿಣ ಕನ್ನಡದ ಕುಂದಾಪುರದಲ್ಲಂತೂ ಕನ್ನಡ ಭಾಷೆ ಕುಂದಾಪ್ರ ಕನ್ನಡ ಎಂದೇ ವಿಶ್ವಖ್ಯಾತಿ ಪಡೆದಿದೆ. ಪ್ರತಿ ಶೈಲಿಯ ಮಾತಿನ ಗತ್ತು, ಗಮ್ಮತ್ತು ಕೇಳಿದವರಿಗೆ ಮಾತ್ರ ತಿಳಿಯುತ್ತದೆ.

ಕರ್ನಾಟಕದಾಚೆ ಕನ್ನಡ
ಆಸ್ಟ್ರೇಲಿಯಾದ ಅಡಿಲೈಡ್, ವೆಸ್ಟರ್ನ ಆಸ್ಟ್ರೇಲಿಯಾ, ಮೆಲ್ಬರ್ನ, ಸಿಡ್ನಿ ಕನ್ನಡ ಸಂಘ, ಯುಎಇಯ ದುಬೈ, ಅಬುಧಾಬಿ ಕನ್ನಡ ಸಂಘ, ಕನ್ನಡ ಕೂಟ, ದುಬೈ ಹೆಮ್ಮೆಯ ಕನ್ನಡಿಗರು, ಕನ್ನಡ ಬಳಗ ಯುನೈಟೆಡ್ ಕಿಂಗಡಮ್, ವಾಷಿಂಗ್ಟನ್ನ ಕಾವೇರಿ ಕನ್ನಡ ಸಂಘ, ಅಸೊಸಿಯೆಷನ್ ಆಫ್ ಕನ್ನಡ ಕೂಟಾಸ್ ಆಫ್ ಅಮೇರಿಕಾ (ಅಕ್ಕ) ಜೊತೆಗೆ ಭಾರತದ ಇತರ ರಾಜ್ಯಗಳಲ್ಲೂ ಕನ್ನಡ ಸಂಘ, ಒಕ್ಕೂಟಗಳಿರುವುದು ಹೆಮ್ಮೆಯ ಸಂಗತಿ. ಕನ್ನಡಿಗರು ಎಲ್ಲೇ ಹೋದರೂ ಕನ್ನಡ, ಕನ್ನಡತನವನ್ನು ಪಸರಿಸುತ್ತಲೆ ಇದ್ದಾರೆ.

ಸ್ವರಾಂತ್ಯ ಶಬ್ದಗಳು
ಕನ್ನಡದಲ್ಲಿರುವ ಬಹುತೇಕ ಶಬ್ದಗಳು ಸ್ವರಗಳ ಅಂತ್ಯ ಕಾಣುತ್ತವೆ. ’ಅ’ ದಿಂದ ’ಔ’ ವರೆಗಿನ ಸ್ವರಗಳು ಶಬ್ದಗಳ ಅಂತ್ಯದಲ್ಲಿರುತ್ತವೆ. ಈ ಒಂದು ಪ್ರಮುಖ ವಿಶೇಷತೆಯಿಂದ ಹಾಗೂ ಭಾಷಾಶಾಸ್ತ್ರದ ಪ್ರಕಾರ ಕನ್ನಡ ಭಾಷೆಗಳ ರಾಣಿ ಎಂದು ಕರೆಸಿಕೊಳ್ಳುತ್ತದೆ.

ಕಲೆ-ಸಂಸ್ಕೃತಿಗಳ ತವರು
ಯಕ್ಷಗಾನ, ವೀರಗಾಸೆ, ದೊಡ್ಡಾಟ, ಸಣ್ಣಾಟ, ಬಯಲಾಟ, ಭೂತಕೋಲ, ಕಂಸಾಳೆ, ತಾಳ ಮದ್ದಲೆ, ಡೊಳ್ಳು ಕುಣಿತ, ಕರಡಿ ಮಜಲು, ಜನಪದ ಗೀತೆ ವೈವಿಧ್ಯ, ಹಬ್ಬ-ಹರಿದಿನ, ಸಂಪ್ರದಾಯ-ಪ್ರತೀತಿ ಯಾರೇ ಇರಲಿ ಕನ್ನಡ ನಾಡಿನ ಅಸಂಖ್ಯ ಕಲೆ ಸಂಸ್ಕೃತಿ ದರ್ಶಿಸಿದವರ ಮನ ಮುದಗೊಳ್ಳುವುದಂತೂ ಶತಃಸತ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!