ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ, ಇಡೀ ರಾಜ್ಯವೇ ಕಾತರದಿಂದ ಕಾಯುತ್ತಿರುವ ಕ್ಷಣ ಆಗಮಿಸಿದ್ದು, ಗೆದ್ದು ರಾಜ್ಯದ ಚುಕ್ಕಾಣಿ ಹಿಡಿಯುವ ಪಕ್ಷ ಯಾವುದು ಎಂಬ ಕುತೂಹಲ ಹೆಚ್ಚಾಗಿದೆ.
ಮೇ. 10 ರಂದು ಒಂದೇ ಹಂತದಲ್ಲಿ ರಾಜ್ಯದ 224 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆದಿದ್ದು, ಪ್ರತಿ ಅಭ್ಯರ್ಥಿಯೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಅಂತಿಮ ನಿರ್ಣಯ ಮತದಾರನದ್ದು. ಮತದಾರ ಈಗಾಗಲೇ ತನ್ನ ಅಮೂಲ್ಯ ಮತವನ್ನು ನೀಡಿದ್ದು, ರಾಜ್ಯದ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಚುನಾವಣೋತ್ತರ ಸಮೀಕ್ಷೆಯಲ್ಲಿ ಅತಂತ್ರ ಇಲ್ಲವೇ ಕಾಂಗ್ರೆಸ್ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಇದೇ ನಿಜವಾಗುತ್ತದಾ ಅಥವಾ ಬಿಜೆಪಿ ಗೆಲುವು ಸಾಧಿಸುತ್ತದೆಯಾ? ಇಲ್ಲವೇ ಅತಂತ್ರ ವಿಧಾನಸಭೆ ಎದುರಾಗಿ ಜೆಡಿಎಸ್ ಜೊತೆ ಮೈತ್ರಿಗೆ ಇತರ ಪಕ್ಷಗಳು ಮುಂದಾಗುತ್ತವೆಯೇ ಕಾದು ನೋಡಬೇಕಿದೆ.
ಬೆಳಗ್ಗೆ8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಲಿದ್ದು, ಬೆಳಗ್ಗೆ 7:30ಕ್ಕೆ ಮತಯಂತ್ರಗಳನ್ನು ಶೇಖರಿಸಿ ಇಟ್ಟಿರುವ ಸ್ಟ್ರಾಂಗ್ ರೂಂಗಳನ್ನು ಕೇಂದ್ರ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಗುತ್ತದೆ.
ಮೊದಲು ಅಂಚೆಮತ ಎಣಿಕೆ ಆರಂಭವಾಗುತ್ತದೆ, ತದನಂತರ ಮತಯಂತ್ರಗಳ ಎಣಿಕೆ ಆರಂಭವಾಗಲಿದೆ. ರಾಜ್ಯದಲ್ಲಿ 3.67 ಕೋಟಿ ಮತದಾರರು ನೀಡಿರುವ ಜನಾದೇಶ ಶೀಘ್ರವೇ ಬಹಿರಂಗವಾಗಲಿದೆ.