ಹೊಸದಿಗಂತ ಡಿಜಿಟಲ್ ಡೆಸ್ಕ್:
‘ವಂದೇ ಮಾತರಂ’ ಗೀತೆಗೆ ರಾಷ್ಟ್ರಗೀತೆಯಷ್ಟೇ ಕಾನೂನುಬದ್ಧ ಮಾನ್ಯತೆ ನೀಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರದ ಗುರುತು ಜನರು ಮತ್ತು ಸಂವಿಧಾನದಿಂದ ರೂಪುಗೊಳ್ಳುತ್ತದೆ, ಅದನ್ನು ಯಾವುದೇ ಧಾರ್ಮಿಕ ಪ್ರತೀಕಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಜನ ಗಣ ಮನ’ ದೇಶದ ವೈವಿಧ್ಯತೆ, ಜನತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಆದರೆ ‘ವಂದೇ ಮಾತರಂ’ ಧಾರ್ಮಿಕ ಸಂಕೇತದ ನೆಲೆಯಲ್ಲಿ ರಚಿತವಾಗಿರುವ ಕಾರಣ, ಅದನ್ನು ರಾಷ್ಟ್ರಗೀತೆಗೆ ಸಮಾನವಾಗಿ ಪರಿಗಣಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಭಾರತ ಸಂವಿಧಾನದ ಮೂಲ ಆತ್ಮ “ನಾವು, ಭಾರತದ ಜನರು” ಎಂಬ ತತ್ವದ ಮೇಲೆ ನಿಂತಿದೆ. ಇಲ್ಲಿ ಧರ್ಮ, ನಂಬಿಕೆ, ಅಭಿವ್ಯಕ್ತಿ ಮತ್ತು ಪೂಜೆಯ ಸ್ವಾತಂತ್ರ್ಯಕ್ಕೆ ಸಂವಿಧಾನ ಭರವಸೆ ನೀಡುತ್ತದೆ. ಇದೇ ದೇಶದ ನಿಜವಾದ ಶಕ್ತಿ ಎಂದು ಒವೈಸಿ ಒತ್ತಿಹೇಳಿದ್ದಾರೆ.
ಸಂವಿಧಾನ ರಚನೆ ಸಂದರ್ಭದಲ್ಲಿ ರಾಷ್ಟ್ರದ ಗುರುತನ್ನು ಧಾರ್ಮಿಕ ರೂಪಕಗಳಿಗೆ ಕಟ್ಟಿ ಹಾಕುವ ಕೆಲ ಪ್ರಸ್ತಾಪಗಳು ಬಂದಿದ್ದರೂ, ಅವುಗಳನ್ನು ಸಭೆ ತಿರಸ್ಕರಿಸಿತ್ತು ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ. ಭಾರತವು ಯಾವುದೇ ದೇವತೆ ಅಥವಾ ಧಾರ್ಮಿಕ ಚಿಹ್ನೆಯ ಪ್ರತಿರೂಪವಲ್ಲ, ಅದು ಜನರ ಒಗ್ಗಟ್ಟಿನಿಂದ ಕಟ್ಟಿದ ಗಣರಾಜ್ಯ ಎಂದು ಅವರು ಹೇಳಿದ್ದಾರೆ.



