ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಲು ದೆಹಲಿ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ. ಎಲ್ಲ ಆರೋಪಗಳ ಮೇಲೆ ಕೇಸು ದಾಖಲಿಸುವಂತೆ ಹೇಳಿದೆ.
2023ರಲ್ಲಿ ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳು ಎರಡು ಬಾರಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಜೂನ್ 15 ರಂದು ಬ್ರಿಜ್ ಭೂಷಣ್ ಶರಣ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354, 354 (ಎ), 354 (ಡಿ) ಅಡಿಯಲ್ಲಿ ಚಾರ್ಚ್ಶೀಟ್ ಸಲ್ಲಿಸಲಾಗಿದೆ.
ಆರು ಕುಸ್ತಿಪಟುಗಳ ದೂರುಗಳನ್ನು ಆಧರಿಸಿ ದೆಹಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದೆ. ಬ್ರಿಜ್ ಭೂಷಣ್ ಅವರನ್ನು ಲೈಂಗಿಕ ಕಿರುಕುಳ, ಕಿರುಕುಳ ಮತ್ತು ಹಿಂಬಾಲಿಸುವ ಅಪರಾಧಗಳಿಗಾಗಿ ವಿಚಾರಣೆಗೆ ಒಳಪಡಿಸಬೇಕು ಮತ್ತು ಶಿಕ್ಷಿಸಬೇಕು ಎಂದು ಹೇಳಿದೆ. ಆಗಿನ ಡಬ್ಲ್ಯುಎಫ್ಐ ಅಧ್ಯಕ್ಷರ “ದೈಹಿಕವಾಗಿ ತಪ್ಪು ನಡತೆಯನ್ನು ಸಹ ನೋಡಿದ್ದೇವೆ ಎಂದು ಸಾಕ್ಷಿಗಳು ಉಲ್ಲೇಖಿಸಿವೆ ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ.
ಕುಸ್ತಿಪಟುಗಳ ದೂರಿನ ಆಧಾರದ ಮೇಲೆ ಬ್ರಿಜ್ ಭೂಷಣ್ ವಿರುದ್ಧ ಎರಡು ಎಫ್ಐಆರ್ ದಾಖಲಿಸಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಒಂದು ಪ್ರಕರಣ ದಾಖಲಾಗಿದ್ದು, ಅಪ್ರಾಪ್ತ ವಯಸ್ಸಿನ ಮಹಿಳಾ ಕುಸ್ತಿಪಟುವಿನ ಈ ಪ್ರಕರಣವನ್ನು ರದ್ದು ಮಾಡುವಂತೆ ಕೋರಲಾಗಿದೆ.
ಕುಸ್ತಿಪಟುಗಳು ದಾಖಲಿಸಿದ ಎಫ್ಐಆರ್ ಪ್ರಕಾರ, ತನಿಖೆ ಪೂರ್ಣಗೊಳಿಸಲಾಗಿದೆ. ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಐಪಿಸಿಯ ಸೆಕ್ಷನ್ 354, 354 ಎ, 354 ಡಿ ಮತ್ತು ಐಪಿಸಿಯ ಸೆಕ್ಷನ್ 109, 354, 354 ಎ ಮತ್ತು 506 ರ ಅಡಿಯಲ್ಲಿ ಆರೋಪಿ ವಿನೋದ್ ತೋಮರ್ (ಕುಸ್ತಿ ಒಕ್ಕೂಟದ ಅಂದಿನ ಸಹಾಯಕ ಕಾರ್ಯದರ್ಶಿ) ವಿರುದ್ಧ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ಚಾರ್ಜ್ಶೀಟ್ ಸಲ್ಲಿಸುತ್ತಿದ್ದೇವೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.