October 23, 2026
Friday, October 23, 2026
spot_img

ಬ್ಯಾರಕ್ ಬದಲಾವಣೆ ಬಗ್ಗೆ ಇಂದು ಕೋರ್ಟ್ ನಿರ್ಧಾರ: ಪವಿತ್ರಾ ಗೌಡ ಪಾಲಿಗೆ ಬಿಗ್‌ಡೇ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಪಾಲಿಗೆ ಇಂದು ಬಹುದೊಡ್ಡ ದಿನವಾಗಿದೆ. ಬ್ಯಾರಕ್ ಬದಲಾವಣೆ ವಿಚಾರವಾಗಿ ಇಂದು ನ್ಯಾಯಾಲಯ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.

ಹಲವು ತಿಂಗಳುಗಳಿಂದ ಪವಿತ್ರಾ ಗೌಡ ಬ್ಯಾರಕ್‌ ಬದಲಾಯಿಸಿ ಕೊಡಿ ಎಂದು ಮನವಿ ಮಾಡುತ್ತಲೇ ಇದ್ದರು. ಆದರೆ ಈ ಬಗ್ಗೆ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿರಲಿಲ್ಲ. ಬ್ಯಾರಕ್ ಬದಲಾವಣೆ ಕೋರಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿದೆ.

ಮಹಿಳಾ ಬ್ಯಾರಕ್‌ಗಳನ್ನು ಪರಿಶೀಲಿಸಲು ನ್ಯಾಯಾಧೀಶರೇ ಜೈಲಿಗೆ ಭೇಟಿ ನೀಡಬೇಕು ಎಂದು ಪವಿತ್ರಾ ಗೌಡ ಪರ ವಕೀಲರು ಮನವಿ ಮಾಡಿದ್ದಾರೆ. ಈ ಮನವಿಯ ಬಗ್ಗೆಯೂ ನ್ಯಾಯಾಲಯ ಇಂದು ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಬ್ಯಾರಕ್‌ನಲ್ಲಿ ವಿದೇಶಿ ಕೈದಿಗಳು ಇದ್ದಾರೆ. ಅವರು ಮಧ್ಯರಾತ್ರಿ, ತಡರಾತ್ರಿವರೆಗೂ ಮಲಗೋದಿಲ್ಲ. ಗಲಾಟೆ ಮಾಡುತ್ತಾರೆ. ನನ್ನ ಬಟ್ಟೆ, ಇತರ ವಸ್ತುಗಳನ್ನು ಕೇಳದೇ ಬಳಕೆ ಮಾಡುತ್ತಿದ್ದಾರೆ. ಮಾತನಾಡಲು ಹೋದರೆ ಜಗಳಕ್ಕೆ ಬರುತ್ತಾರೆ ಎಂದು ಪವಿತ್ರಾ ಹೇಳಿಕೊಂಡಿದ್ದಾರೆ.

ಪವಿತ್ರಾ ಗೌಡ ಇದೀಗ 30 ಮಹಿಳಾ ಕೈದಿಗಳಿರುವ ಬ್ಯಾರಕ್‌ನಲ್ಲಿದ್ದಾರೆ. ಇದರಲ್ಲಿ ಐವರು ವಿದೇಶಿ ಕೈದಿಗಳಿದ್ದಾರೆ. ಅವರ ವರ್ತನೆ ಮಾನಸಿಕ ಕಿರಿಕಿರಿ ಆಗುತ್ತಿದೆ. ದೈಹಿಕ ಆರೋಗ್ಯದಲ್ಲಿಯೂ ತೊಂದರೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

Must Read