ಹೊಸದಿಗಂತ ವರದಿ ಮಂಗಳೂರು:
ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣದ ಮರು ತನಿಖೆಯಾಗುವ ಮೂಲಕ ಆ ಕುಟುಂಬಕ್ಕೆ ನ್ಯಾಯ ದೊರೆಯಬೇಕು. ಆರೋಪಿಗಳು ಯಾರೇ ಇರಲಿ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಸರಕಾರವನ್ನು ಆಗ್ರಹಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಮರು ತನಿಖೆಯಾಗಬೇಕೆಂದು ಬಿಜೆಪಿ ರಾಜ್ಯ ಸರಕಾರವನ್ನು ಒತ್ತಾಯಿಸಲಿದೆ. ಆ.27ರಂದು ಬೆಳ್ತಂಗಡಿಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯನ್ನು ಒಳಗೊಂಡಂತೆ ಬೃಹತ್ ಹೋರಾಟ ನಡೆಯಲಿದ್ದು, ಮರುದಿನ ಉಡುಪಿ ಹಾಗೂ ದ.ಕ.ಜಿಲ್ಲೆಯ ಶಾಸಕರನ್ನೊಳಗೊಂಡ ನಿಯೋಗ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರನ್ನು ಭೇಟಿ ಮಾಡಿ ಮರು ತನಿಖೆಗೆ ಒತ್ತಾಯಿಸಿ ಮನವಿ ಸಲ್ಲಿಸಲಿದೆ ಎಂದರು.
ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಲಿ
ಈಗಾಗಲೇ ಸಿಬಿಐ ತನಿಖೆ ಆಗಿದೆ. ಬಂಧಿತ ಆರೋಪಿ ದೋಷಮುಕ್ತನಾಗಿರುವುದರಿಂದ ನೈಜ ಆರೋಪಿಗಳ ಬಂಧನಕ್ಕೆ ಸರಕಾರ ಸಮಗ್ರವಾಗಿ ತನಿಖೆ ನಡೆಸಬೇಕು. ಸೌಜನ್ಯ ಕುಟಂಬಕ್ಕೆ ನ್ಯಾಯ ಸಿಗಲೇ ಬೇಕು. ಅಮಾಯಕ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಸಿಗಲೇಬೇಕೆಂದು ಬಿಜೆಪಿ ಹಿಂದಿನಿಂದಲೂ ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದೆ. ಇದೀಗ ದೊಡ್ಡ ಮಟ್ಟದಲ್ಲಿ ಮತ್ತೊಮ್ಮೆ ಹೋರಾಟ ಕೈಗೆತ್ತಿಕೊಳ್ಳುತ್ತಿದೆ. ಬಳಿಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರನ್ನು ಭೇಟಿಯಾಗುವುದಾಗಿ ತಿಳಿಸಿದರು.
ಸೌಜನ್ಯಳನ್ನು ಹತ್ಯೆಗೈದ ನಿಜವಾದ ಆರೋಪಿಗಳು ಯಾರು ಎಂಬುದು ಪತ್ತೆಯಾಗಲೇಬೇಕು. ಎಷ್ಟೇ ಪ್ರಭಾವಿಗಳಿದ್ದರೂ ಬಂಧನವಾಗಲೇಬೇಕು. ಆ ಮೂಲಕ ಎಲ್ಲಾ ಸಂಶಯಗಳು ನಿವಾರಣೆಯಾಗಬೇಕು. ಈ ಹೋರಾಟದಲ್ಲಿ ಬಿಜೆಪಿ ನಿಲುವು ಸ್ಪಷ್ಟವಿದ್ದು, ನೈಜ ಆರೋಪಿಗಳ ಬಂಧನವಾಗುವವರೆಗೆ ಹೋರಾಟ ನಡೆಯಲಿದೆ. ಸೌಜನ್ಯ ಆತ್ಮಕ್ಕೆ ಶಾಂತಿ ಸಿಗಬೇಕೆಂಬುದೇ ನಮ್ಮ ಹೋರಾಟ. ಈಗಾಗಲೇ ಶಾಸಕರಾದ ಹರೀಶ್ ಪೂಂಜ ಹಾಗೂ ಪ್ರತಾಪ ಸಿಂಹ ನಾಯಕ್ ಅವರು ಮಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಇದೀಗ ಮತ್ತೊಮ್ಮೆ ಉಭಯ ಜಿಲ್ಲೆಗಳ ಶಾಸಕರ ನಿಯೋಗ ಮನವಿ ಸಲ್ಲಿಸಲಿದೆ ಎಂದು ನಳಿನ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ರಾಜೇಶ್ ನಾಕ್, ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ ಎಂ., ಉಡುಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಜಿಲ್ಲಾ ಪ್ರಭಾರಿ ರಾಜೇಶ್ ಕಾವೇರಿ ಮತ್ತಿತರರು ಉಪಸ್ಥಿತರಿದ್ದರು.