ಕೊವ್ಯಾಕ್ಸಿನ್‌ ಸುರಕ್ಷಿತ ಲಸಿಕೆ: ಸೈಡ್‌ ಎಫೆಕ್ಟ್‌ ಆತಂಕಕ್ಕೆ ಭಾರತ್‌ ಬಯೋಟೆಕ್‌ ನೀಡಿತು ಸ್ಪಷ್ಟನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬ್ರಿಟನ್‌ನಲ್ಲಿ (UK) ಅಸ್ಟ್ರಾಜೆನಿಕಾ ಕಂಪನಿಯ ಕೋವಿಶೀಲ್ಡ್‌ ಲಸಿಕೆಯ (Covishield vaccine) ಅಡ್ಡ ಪರಿಣಾಮಗಳ (Side effects) ಬಗ್ಗೆ ಆಘಾತಕಾರಿ ಮಾಹಿತಿ ಹೊರಬರುತ್ತಿದ್ದಂತೆ ಭಾರತದಲ್ಲಿಯೂ ಕೋವಿಶೀಲ್ಡ್‌ ಲಸಿಕೆ ಸೈಡ್‌ ಎಫೆಕ್ಟ್‌ಗಳ ಕುರಿತು ಅಧ್ಯಯನ ನಡೆಯಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ.

ಇದರ ಬೆನ್ನಲ್ಲೇ, ಕೊವ್ಯಾಕ್ಸಿನ್‌ (Covaxin) ಅತ್ಯಂತ ಸುರಕ್ಷಿತವಾಗಿ ತಯಾರಿಸಲಾದ ಲಸಿಕೆಯಾಗಿದೆ ಎಂಬುದಾಗಿ ಭಾರತದ ಲಸಿಕಾ ತಯಾರಿಕಾ ಕಂಪನಿಯಾದ ಭಾರತ್‌ ಬಯೋಟೆಕ್‌ (Bharat Biotech) ಪ್ರಕಟಣೆ ತಿಳಿಸಿದೆ.

“ಸುರಕ್ಷತೆ ಹಾಗೂ ದಕ್ಷತೆಯೇ ಮೊದಲು ಎಂಬ ದೃಷ್ಟಿಕೋನದಿಂದ ಹಲವು ಮಾನದಂಡಗಳನ್ನು ಇಟ್ಟುಕೊಂಡು ಲಸಿಕೆಯನ್ನು ಉತ್ಪಾದಿಸಲಾಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರದ ಲಸಿಕಾಕರಣ ಯೋಜನೆಯ ವೇಳೆ ಅತಿ ಹೆಚ್ಚು ಪ್ರಯೋಗಕ್ಕೀಡಾದ ಲಸಿಕೆ ಎಂದರೆ ಅದು ಕೊವ್ಯಾಕ್ಸಿನ್‌. ಪರವಾನಗಿ ಪ್ರಕ್ರಿಯೆಯ ವೇಳೆ ಸುಮಾರು 27 ಸಾವಿರ ಅಂಶಗಳ ಕುರಿತು ಅಧ್ಯಯನ, ಪರಿಶೀಲನೆ ನಡೆಸಲಾಗಿದೆ. ವೈದ್ಯಕೀಯ ಪ್ರಯೋಗಕ್ಕೂ ಲಸಿಕೆಯನ್ನು ಒಳಪಡಿಸಲಾಗಿದೆ” ಎಂಬುದಾಗಿ ಭಾರತ್‌ ಬಯೋಟೆಕ್‌ ಕಂಪನಿಯು ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ.

ಕೊವ್ಯಾಕ್ಸನ್‌ ಲಸಿಕೆಯನ್ನು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಕೂಡ ಮೌಲ್ಯಮಾಪನ ಮಾಡಿದೆ. ಕೊವ್ಯಾಕ್ಸಿನ್‌ ಲಸಿಕೆಯ ಸುರಕ್ಷತೆ ಹಾಗೂ ಅದರ ದಕ್ಷತೆಯ ಕುರಿತು ಕೂಡ ಮೌಲ್ಯಮಾಪನ ಮಾಡಲಾಗಿದೆ. ಇದುವರೆಗೆ ವ್ಯಾಕ್ಸಿನ್‌ ಸಂಬಂಧಿಸಿದಂತೆ ಯಾವುದೇ ಅಡ್ಡ ಪರಿಣಾಮಗಳು, ರಕ್ತ ಹೆಪ್ಪುಗಟ್ಟುವುದು, ಥ್ರಂಬೊಸಿಟೋಪೇನಿಯಾ, ಪೆರಿಕಾರ್ಡಿಟಿಸ್‌ ಹಾಗೂ ಮೈಯೋಕಾರ್ಡಿಟಿಸ್‌ ಸೇರಿ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ. ಹಾಗಾಗಿ, ಕೊವ್ಯಾಕ್ಸಿನ್‌ ಲಸಿಕೆಯು ಅತ್ಯಂತ ಸುರಕ್ಷಿತವಾಗಿದೆ” ಎಂದು ಮಾಹಿತಿ ನೀಡಿದೆ.

ಅಸ್ಟ್ರಾಜೆನೆಕಾ ಕೋವಿಶೀಲ್ಡ್‌ ಲಸಿಕೆ ಮತ್ತು ಥ್ರಂಬೋಸಿಸ್ (ಟಿಟಿಎಸ್) ನಡುವಿನ ಸಂಬಂಧವನ್ನು ಒಪ್ಪಿಕೊಂಡಿದೆ. ಅಸ್ಟ್ರಾಜೆನೆಕಾ ಲಸಿಕೆ ಸೂತ್ರವನ್ನು ಪುಣೆ ಮೂಲದ ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ನೀಡಲಾಗಿದೆ. ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಕೋಟ್ಯಂತರ ಮಂದಿ ಪಡೆದಿದ್ದಾರೆ. ಈಗ ಅಮೆರಿಕದಲ್ಲಿ ಅಡ್ಡಪರಿಣಾಮದ ಕುರಿತು ಕಂಪನಿಯೇ ಒಪ್ಪಿಕೊಂಡಿರುವುದರಿಂದ ಭಾರತದಲ್ಲೂ ಈ ಕುರಿತು ಅಧ್ಯಯನ ನಡೆಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!