ಕೋವಿಡ್: ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಎಚ್ಚರ ವಹಿಸಲು ಜಿಲ್ಲಾಧಿಕಾರಿ ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕವಾಗಿ ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಶಿಷ್ಟಾಚಾರ ಪಾಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ರವಿಕುಮಾರ್ ಎಂ.ಆರ್. ಸೂಚಿಸಿದ್ದಾರೆ.
ಕೋವಿಡ್ ಕುರಿತಾಗಿ ಕೇಂದ್ರ ಸರ್ಕಾರ ಈಗಾಗಲೇ ಮಾರ್ಗಸೂಚಿ ಪ್ರಕಟಿಸಿದ್ದು, ಜನತೆ ಜಿಲ್ಲೆಯಲ್ಲಿಯೂ ಕೆಲವೊಂದು ಶಿಷ್ಟಾಚಾರ ಕ್ರಮಗಳನ್ನು ಪಾಲಿಸಬೇಕು. ಹೊರಾಂಗಣ, ಒಳಾಂಗಣದಲ್ಲಿ ಜನಜಂಗುಳಿಯಿರುವೆಡೆಗಳಲ್ಲಿ ಮಾಸ್ಕ್ ಧರಿಸುವುದು ಅಗತ್ಯ ಎಂದು ಅವರು ಹೇಳಿದ್ದಾರೆ.
ಸಭೆ ಸಮಾರಂಭಗಳ ಆಯೋಜಕರು ಎಚ್ಚರಿಕೆ ವಹಿಸಬೇಕು. ಕೆಲವೊಂದು ಅಗತ್ಯ ಮಾರ್ಗಸೂಚಿ ಪಾಲಿಸಬೇಕು. ಆದಷ್ಟು ಹೊರಾಂಗಣ, ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲಿ ಸಾರ್ವಜನಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಗಲು ಹೊತ್ತಿನಲ್ಲಿ ನಡೆಸುವುದು ಸೂಕ್ತ. ಒಳಾಂಗಣ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದೆ. ಸಾಮಾಜಿಕ ಅಂತರ ಪಾಲನೆ ಕೂಡಾ ಅತೀ ಅಗತ್ಯವಾಗಿದೆ ಎಂದಿರುವ ಅವರು, ಕೈಗಾರಿಕಾ ಸಂಸ್ಥೆ, ಗಾರ್ಮೆಂಟ್ಸ್ ಸಿಬಂದಿ ಕಡ್ಡಾಯವಾಗಿ ದೈಹಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮಾಸ್ಕ್ ಧರಿಸಬೇಕು. ಒಳಾಂಗಣದಲ್ಲಿ ಹೆಚ್ಚಿನ ಜನರ ಗುಂಪುಗೂಡುವಿಕೆ ಕಟ್ಟುನಿಟ್ಟಾಗಿ ತಡೆಗಟ್ಟಬೇಕು. ಜೊತೆಗೆ ಮುಂದಿನ ದಿನಗಳಲ್ಲಿ ಸರ್ಕಾರ ಹೊರಡಿಸುವ ಎಲ್ಲಾ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!