Wednesday, February 8, 2023

Latest Posts

ಕಾಂಗ್ರೆಸ್ ಪಾದಯಾತ್ರೆ ಮೊದಲ ದಿನ: ಗಾಳಿಗೆ ತೂರಿದ ಕೋವಿಡ್ ನಿಯಮ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕೋವಿಡ್ ವೀಕೆಂಡ್ ಕರ್ಫ್ಯೂ ನಡುವೆಯೂ ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಕಾರ್ಯಕ್ರಮ ನಡೆಸಿದೆ. ಮೇಕೆದಾಟು ಸಂಗಮದಿಂದ ಬೆಂಗಳೂರು ವರೆಗೆ ನಡೆಯುವ ಪಾದಯಾತ್ರೆಯಲ್ಲಿ ಮೊದಲ ದಿನ ಮುಕ್ತಾಯವಾಗಿದೆ.

ಪದೇ ಪದೇ ನಾವು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡೇ ಪಾದಯಾತ್ರೆಯನ್ನು ನಡೆಸುತ್ತೇವೆಂದು ಹೇಳುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೊದಲಾದವರೆಲ್ಲರೂ ಕೋವಿಡ್ ನಿಯಮಾವಳಿಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದಾರೆ.

ಪಾದಯಾತ್ರೆಯುದ್ದಕ್ಕೂ ಮಾಸ್ಕ್ ಇಲ್ಲ
ನಿಗದಿತ ಸಮಯದಲ್ಲಿ ಪಾದಯಾತ್ರೆ ಪ್ರಾರಂಭವಾಗುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದ್ದರೂ 11.30ಕ್ಕೆ ಪಾದಯಾತ್ರೆ ಶುರುವಾಗಿತ್ತು. ಪಾದಯಾತ್ರೆಯ ನೇತೃತ್ವ ವಹಿಸಿಕೊಂಡಿರುವ ಡಿಕೆಶಿ ಅವರು ಆರಂಭದಿಂದ ಕೊನೆಯವರೆಗೂ ಮಾಸ್ಕ್ ಧರಿಸಲೇ ಇಲ್ಲ. ತನ್ನ ಸುತ್ತಮುತ್ತ ನೂರಾರು ಹಿಂಬಾಲಕರನ್ನು ಇಟ್ಟುಕೊಂಡು ನಡೆಯುತ್ತಿದ್ದರೂ ಜೊತೆಗಿರುವವರು ಕೂಡ ಮಾಸ್ಕ್ ಧರಿಸುವುದಾಗಲೀ ಅಂತರ ಕಾಯ್ದುಕೊಳ್ಳುವುದಾಗಲೀ ಇದ್ಯಾವುದಕ್ಕೂ ಆದ್ಯತೆ ಕೊಟ್ಟೇ ಇಲ್ಲ. ಕಾರ್ಯಕ್ರಮದಲ್ಲಿ ಭಾಗಿಯಾದ ಜನರಲ್ಲಿ ಬಹುತೇಕ ಮಂದಿ ಮಾಸ್ಕ್ ಧರಿಸಿಲ್ಲ.

ವ್ಯಕ್ತಿಗತ ಅಂತರ ಮರೆತ ಸಿದ್ದರಾಮಯ್ಯ
ನಿನ್ನೆಯಷ್ಟೇ ಸಿದ್ದರಾಮಯ್ಯ ಅವರು ನಾವು ಮಾಸ್ಕ್ ಮತ್ತು ಗ್ಲೌಸ್ ಧರಿಸಿ, ಸ್ಯಾನಿಸೈಟ್ ಬಳಸಿ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಪಾದಯಾತ್ರೆ ನಡೆಸುತ್ತೇವೆ ಎಂದಿದ್ದರು. ಕಾನೂನಿನ ಬಗ್ಗೆ ಗೌರವವಿದೆ ಎಂದೂ ಹೇಳಿದ್ದರು. ಆದರೆ ಇಂದು ಸಾಮಾಜಿಕ ಅಂತರವನ್ನು ಮರೆತು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರೇ ಹೇಳಿದಂತೆ ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದಾರೆ. ಸಿದ್ದರಾಮಯ್ಯ ಅವರು ಮಾಸ್ಕ್-ಗ್ಲೌಸ್ ಹಾಕಿಕೊಂಡಿದ್ದರೂ ಆ ಸಾವಿರಾರು ಮಂದಿ ಮಾತ್ರ ಮಾಸ್ಕ್ ಹಾಕದೇ, ವ್ಯಕ್ತಿಗತ ಅಂತರವನ್ನೂ ಕಾಯ್ದುಕೊಳ್ಳದೇ ಪಾದೆಯಾತ್ರೆಯಲ್ಲಿ ನಡೆದಿದ್ದಾರೆ. ಮಧ್ಯಾಹ್ನದ ವೇಳೆ ಸಿದ್ದರಾಮಯ್ಯ ಅವರಿಗೆ ಜ್ವರ ಬಂದು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ರಾಮನಗರವೂ ಸೇರಿದಂತೆ ರಾಜ್ಯಾದ್ಯಂತ ಕೋವಿಡ್ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಕೋವಿಡ್ ವ್ಯಾಪಿಸುತ್ತಿರುವುದರಿಂದ ಸಾವಿರಾರು ಜನರನ್ನು ಸೇರಿಸಿ, ಪಾದಯಾತ್ರೆಯನ್ನು ನಡೆಸಬೇಡಿ ಎಂದರೂ ಉಡಾಫೆಯಾಗಿ ವರ್ತಿಸಿರುವ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಇದೀಗ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಮತ್ತೆ ಉಡಾಫೆ ತೋರಿಸಿದೆ. ಒಟ್ಟು 10 ದಿನಗಳ ಕಾಲ ಈ ಕಾಂಗ್ರೆಸ್ ಪಾದಯಾತ್ರೆ ನಡೆಯಲಿದೆ. ಕೊನೆಯ ದಿನದಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ಆಯೋಜಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು “ಪಾದಯಾತ್ರೆ ನಡೆಸುವವರಿಗೆ ಈಗಾಗಲೇ ನೋಟೀಸು ಕೊಟ್ಟಿದ್ದೇವೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಪಾದಯಾತ್ರೆ ನಡೆಸದಂತೆ ಸೂಚನೆ ನೀಡಿದ್ದಾರೆ. ನಿಯಮ ಉಲ್ಲಂಘಿಸಿದ್ದಾರೆ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ” ಎಂದಿದ್ದಾರೆ. ಸರಕಾರ ಏನು ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!