ಕೋವಿಡ್ ಲಸಿಕೆ: ಇಂದಿನಿಂದ ಬೂಸ್ಟರ್ ಡೋಸ್ ನೀಡಿಕೆಗೆ ನಡೆದಿದೆ ಸಿದ್ಧತೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟ ಇತರ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ಲಸಿಕಾಕರಣ ಇಂದಿನಿಂದ ಆರಂಭವಾಗಲಿದೆ.

ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯೀ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ನೀಡಿಕೆಗೆ ಮಾನದಂಡಗಳೇನು?

* ಕೋವಿನ್ ಪೋರ್ಟಲ್ ನೋಂದಣಿ ಪ್ರಕಾರ ಎರಡನೇ ಡೋಸ್ ಲಸಿಕೆ ಪಡೆದು 9 ತಿಂಗಳು ಇಲ್ಲವೇ 39 ವಾರಗಳನ್ನು ಪೂರೈಸಿದ 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳು ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣಕ್ಕೆ ಅರ್ಹರಿರುತ್ತಾರೆ.

* ಈ ಹೆಚ್ಚುವರಿ ಲಸಿಕಾ ಡೋಸ್ ಪಡೆಯಲು ವೈದ್ಯರಿಂದ ಯಾವುದೇ ಪ್ರಮಾಣ ಪತ್ರ ಬೇಕಾಗಿರುವುದಿಲ್ಲ.

* ರಾಜ್ಯದಲ್ಲಿ 9 ತಿಂಗಳು/39 ವಾರಗಳನ್ನು ಪೂರೈಸಿದ 6 ಲಕ್ಷ ಆರೋಗ್ಯ ಕಾರ್ಯಕರ್ತರು, 7 ಲಕ್ಷ ಮುಂಚೂಣಿ ಕಾರ್ಯಕರ್ತರು ಮತ್ತು 8ಲಕ್ಷ 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳು ಲಸಿಕೆ ಪಡೆಯಲಿದ್ದಾರೆ.

* ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯನ್ನು ಮೊದಲನೇ ಮತ್ತು ಎರಡನೇ ಡೋಸ್ ಆಗಿ ಪಡೆದಿರುವವರು ಮಾತ್ರ ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣಕ್ಕೆ ಅರ್ಹರಿರುತ್ತಾರೆ.

* ಸ್ಪುಟ್ನಿಕ್ ಲಸಿಕೆಯನ್ನು ಮೊದಲನೇ ಮತ್ತು ಎರಡನೇ ಡೋಸ್ ಆಗಿ ಪಡೆದಿರುವ ಫಲಾನುಭವಿಗಳು ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣಕ್ಕೆ ಅರ್ಹರಿರುವುದಿಲ್ಲ.

* ಎಲ್ಲ ಜಿಲ್ಲೆಗಳಲ್ಲಿ ಲಸಿಕಾ ಡೋಸ್ ಲಾಜಿಸ್ಟಿಕ್, ಸಿಬ್ಬಂದಿ ಇತರ ಅಂಶಗಳನ್ನು ಒಳಗೊಂಡು ಸೂಕ್ಷ್ಮ ಕ್ರಿಯಾ ಯೋಜನೆಗಳನ್ನು ರಚಿಸಲಾಗಿದೆ.

* ಲಸಿಕೆ ಪಡೆದ ಫಲಾನುಭವಿಗಳು ಲಸಿಕಾ ಪ್ರಮಾಣ ಪತ್ರವನ್ನು ಕೋವಿನ್ ಪೋರ್ಟಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

* ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣಕ್ಕೆ ಹೊಸ ನೋಂದಣಿ ಮಾಡಲಾಗುವುದಿಲ್ಲ. 9 ತಿಂಗಳು/39 ವಾರಗಳನ್ನು ಪೂರೈಸಿದ ಅರ್ಹ ಫಲಾನುಭವಿಗಳಿಗೆ ಲಸಿಕಾಕರಣ ಸ್ಲಾಟ್‌ಗಳು ಕೋವಿನ್ ಪೋರ್ಟಲ್‌ನಲ್ಲಿ ಕಾಣಿಸುತ್ತವೆ.

* ಜ. 8ರಿಂದ 9 ತಿಂಗಳು/39 ವಾರಗಳನ್ನು ಪೂರೈಸಿದ ಅರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಕೋವಿನ್ ಪೋರ್ಟಲ್‌ನಿಂದ ಸಂದೇಶಗಳು ಹೋಗುತ್ತವೆ.

ಎಷ್ಟಾಗಿದೆ ರಾಜ್ಯದಲ್ಲಿ ಲಸಿಕಾಕರಣ :
ರಾಜ್ಯದಲ್ಲಿ 4.89 ಕೋಟಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, ಇದುವರೆಗೂ 4.8 ಕೋಟಿ (ಶೇ. 99) ಫಲಾನುಭವಿಗಳಿಗೆ ಮೊದಲನೇ ಡೋಸ್ ಮತ್ತು 3.9 ಕೋಟಿ (ಶೇ. 81) ಫಲಾನುಭವಿಗಳಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ. ಜ. 3ರಿಂದ 15-18 ವರ್ಷದ ಮಕ್ಕಳ ಕೋವಿಡ್-19 ಲಸಿಕೆ ನೀಡಿಕೆ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ. ಈ ಗುಂಪಿನಲ್ಲಿ 31.75 ಲಕ್ಷ ಫಲಾನುಭವಿಗಳಿಗೆ ಲಸಿಕಾಕರಣ ನಡೆಸುವ ಗುರಿ ಹೊಂದಿದ್ದು, 15.5 ಲಕ್ಷ (ಶೇ. 49) ಫಲಾನುಭವಿಗಳಿಗೆ ಮೊದಲನೇ ಡೋಸ್ ಲಸಿಕೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!