ದಿಗಂತ ವರದಿ, ಹುಬ್ಬಳ್ಳಿ:
ಬೀದಿಗಿಳಿದು ಪಾದಯಾತ್ರೆ ಮಾಡಿ ಮೇಕೆದಾಟು ಸಮಸ್ಯೆಯನ್ನು ಇನ್ನುಷ್ಟು ಕ್ಲಿಷ್ಟಕರ ಮಾಡುತ್ತಿದ್ದಾರೆ. ನದಿ ವಿವಾದವನ್ನು ಸೂಕ್ಷ್ಮವಾಗಿ ಬಗೆಹರಿಸಬೇಕು ಅದನ್ನು ಬಿಟ್ಟು ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ಶಾಸಕ ಜಗದೀಶ ಶೆಟ್ಟರ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಹತ್ತಿರ ಬಂದಿರುವುದಕ್ಕೆ ಮತ್ತು ವೋಟ್ ಬ್ಯಾಂಕ್‌ಗಾಗಿ ಮಾಡುತ್ತಿರುವ ಪಾದಯಾತ್ರೆ ಇದು. ಕಾಂಗ್ರೆಸ್ ಅಧಿಕಾರದಲ್ಲಿದ್ದ ಅವಧಿಯಲ್ಲಿ ಯಾಕೆ ಮೇಕೆದಾಟು ಯೋಜನೆಗೆ ತಾರ್ಕಿಕ ಅಂತ್ಯ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಅಧಿವೇಶನದಲ್ಲಿ ಈ ವಿಚಾರ ಚರ್ಚಿಸಲಿಲ್ಲ: ಬೆಂಗಳೂರು ಮತ್ತು ಬೆಳಗಾವಿಯಲ್ಲಿ ನಡೆದ ಅವೇಶನದಲ್ಲಿ ಮೇಕೆದಾಟು ವಿಷಯದ ಬಗ್ಗೆ ಗಂಭೀರ ಚರ್ಚೆಯನ್ನೇ ಮಾಡಿಲ್ಲ. ಚರ್ಚೆ ಮಾಡಿದರೆ ಸರ್ಕಾರ ಸೂಕ್ತ ಉತ್ತರ ನೀಡುತ್ತದೆ ಎಂದು ಹಿಂಜರಿದರು. ಬೀದಿಗಿಳಿದು ಹೋರಾಟ ಮಾಡುತ್ತಿರುವ ಅವರ ನಡೆ ಸಂಪೂರ್ಣ ರಾಜಕೀಯ ವಾಗಿದೆ ಎಂದರು.
ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಸರ್ಕಾರ ವಾರಾಂತ್ಯ ಕರ್ಫ್ಯೂ ಘೋಷಿಸಿದೆ. ಈ ಸಮಯದಲ್ಲಿ ಸಹ ಅವರು ನಿಯಮಾವಳಿ ಉಲ್ಲಂಘಿಸಿ ಭಂಡತನ ಪ್ರದರ್ಶಿಸುತ್ತಾರೆ. ಜನಸಾಮಾನ್ಯರ ಆರೋಗ್ಯಕ್ಕಿಂತ ರಾಜಕಾರಣವೇ ಅವರಿಗೆ ಮುಖ್ಯವಾಗಿದೆ ಎಂದು ಆರೋಪಿಸಿದರು.
ಎಪ್ಪತ್ತು ವರ್ಷ ಲೂಟಿ: ಎಪ್ಪತ್ತು ವರ್ಷ ದೇಶ ಲೂಟಿ ಮಾಡಿ, ಈಗ ರಾಜಕೀಯ ಮಾಡುತ್ತಿದ್ದಾರೆ. ಇದೊಂದು ರಾಜಕೀಯ ಪ್ರಹಸನವಾಗಿದ್ದು, ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮೇಕೆದಾಟು ವಿಷಯದಲ್ಲಿ ತಮಿಳುನಾಡು ಕಾಂಗ್ರೆಸ್ ತನ್ನ ನಡೆ ಏನೆಂಬುದನ್ನು ಸ್ಪಷ್ಟಪಡಿಸಲಿ. ಅಲ್ಲಿ ಯೋಜನೆ ವಿರೋಸುವ ಕಾಂಗ್ರೆಸ್, ಇಲ್ಲಿ ಅನುಷ್ಠಾನಕ್ಕೆ ಒತ್ತಾಯಿಸುತ್ತದೆ. ಮಹಾದಾಯಿ ವಿಚಾರದಲ್ಲೂ ಗೋವಾ ಕಾಂಗ್ರೆಸ್ ಇದೇ ರೀತಿ ವರ್ತಿಸುತ್ತಿದೆ. ಅವರು ಯಾವಾಗಲೂ ದ್ವಂದ್ವ ನಿಲುವು ತಾಳುತ್ತಲೇ ರಾಜಕೀಯ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹದಾಯಿ ವಿಚಾರದ ಕುರಿತು ಕಾಂಗ್ರೆಸ್ ಪಾದಯಾತ್ರೆ ನಡೆಸಿದರೆ, ಯೋಜನೆ ಕುರಿತು ಅವರು ಮಾಡಿರುವ ರಾಜಕಾರಣ ಬಹಿರಂಗ ಪಡಿಸುತ್ತೇವೆ ಎಂದರು.