ಪರಿಶಿಷ್ಟರನ್ನು ಕತ್ತಲಲ್ಲಿಟ್ಟ ಕೀರ್ತಿ ಕಾಂಗ್ರೆಸ್’ಗೆ ಸಲ್ಲಬೇಕು: ಶಾಸಕದ್ವಯರ ವಾಗ್ದಾಳಿ

ಹೊಸದಿಗಂತ ವರದಿ, ಕುಶಾಲನಗರ:

ಭಾರತೀಯ ಜನತಾ ಪಾರ್ಟಿಯ ಎಸ್.ಸಿ.ಮೋರ್ಚಾದ ಸಮಾವೇಶ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಕೊಡಗಿನಲ್ಲಿ‌ 600 ಕೋಟಿ ರೂ.ಗಳನ್ನು ಎಸ್.ಸಿ.ಜನಾಂಗದ ಅಭಿವೃದ್ಧಿಗೆ ಬಳಸಲಾಗಿದೆ. ಈ ಹಿಂದಿನ ಕಾಂಗ್ರೆಸ್ ಸರಕಾರದ ಜನಪ್ರತಿನಿಧಿಗಳು ಎಸ್.ಸಿ, ಎಸ್.ಟಿ.ಜನಾಂಗವನ್ನು ಕಡೆಗಣಿಸಿದ್ದರು ಎಂದು ಆರೋಪಿಸಿದರು. ಅಲ್ಲದೆ ಬಿಜೆಪಿಯ ಅಭಿವೃದ್ಧಿ ಯೋಜನೆಗಳಿಗೂ ಅಡ್ಡಗಾಲು ಹಾಕುವ ಮನಸ್ಥಿತಿ ಕಾಂಗ್ರೆಸ್ ನಾಯಕರದ್ದು, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ಜನಾಂಗದವರಿಗೆ ಶಿಕ್ಷಣ, ವಸತಿ ವ್ಯವಸ್ಥೆಗೆ ಬಿಜೆಪಿ ಪ್ರಮುಖ ಆದ್ಯತೆ ನೀಡುತ್ತಿದೆ. ಅಂಬೇಡ್ಕರ್ ಬದುಕಿದ್ದಾಗ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಲ್ಲದೆ, ಅವರ ನಿಧನ ಸಂದರ್ಭ ಕೂಡಾ ಸೂಕ್ತ ಗೌರವ ನೀಡದೆ ಅಪಮಾನ ಮಾಡಲಾಗಿದೆ. ಬಿಜೆಪಿ ಸರಕಾರ ಬಂದ ಬಳಿಕ‌ ಅಂಬೇಡ್ಕರ್ ಸಮಾಧಿ, ಪುತ್ಥಳಿ ನಿರ್ಮಾಣ ಮಾಡಲಾಯಿತು ಎಂದು ತಿಳಿಸಿದರು.
ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ದೇಶದ ಸ್ವತ್ತು. ಅಂತಹ ಮಹಾನ ನಾಯಕನಿಗೆ ದ್ರೋಹ ಬಗೆದ ಪಕ್ಷ ಕಾಂಗ್ರೆಸ್. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರಿಗೆ ಭಾರತ ರತ್ನ ಘೋಷಿಸಿದ ಕೀರ್ತಿ ನಮ್ಮದು. ಬಿಜೆಪಿ ಎಲ್ಲಾ ವರ್ಗದ ಪಕ್ಷ, ಸರ್ವವ್ಯಾಪಿ ಎಂದರು.
ಪರಿಶಿಷ್ಟರನ್ನು ಕೇವಲ‌ ವೋಟ್ ಬ್ಯಾಂಕ್’ಗಾಗಿ ಬಳಸಿ ಮುಖ್ಯವಾಹಿನಿಗೆ ತರದೆ ಕತ್ತಲಲ್ಲಿಟ್ಟ ಕೀರ್ತಿ‌ ಕಾಂಗ್ರೆಸ್’ಗೆ ಸಲ್ಲಬೇಕು ಎಂದರು.
ವಿಧಾನಪರಿಷತ್ ಸದಸ್ಯೆ, ಬಿಜೆಪಿ ರಾಜ್ಯ ವಕ್ತಾರೆ ತೇಜಸ್ವಿನಿ ರಮೇಶ್ ಮಾತನಾಡಿ, ಕೊಡಗಿಗೆ ಕಾಂಗ್ರೆಸ್ ಪಕ್ಷದ ಸೇವೆ, ಕೊಡುಗೆ ಏನೇನೂ ಇಲ್ಲ. ಯಾವ ಆಧಾರದ ಮೇಲೆ ಮತದಾರರು ಕಾಂಗ್ರೆಸ್ ಬೆಂಬಲಿಸಬೇಕಿದೆ ಎಂದು ಪ್ರಶ್ನಿಸಿದರಲ್ಲದೆ, ಕೊಡಗಿನ ಇಬ್ಬರು ಶಾಸಕರು ಅಭಿವೃದ್ದಿಗೆ 4 ಸಾವಿರ ಕೋಟಿ ಅನುದಾನ ತಂದಿದ್ದಾರೆ ಎಂದರು.
ಕೊಡಗಿನ ಅಭಿವೃದ್ದಿಗೆ ಒಂದೇ ನಾಣ್ಯದ ಎರಡು ಮುಖದಂತೆ ಶಾಸಕರುಗಳು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದರು.
ಎಸ್.ಸಿ.ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರತಾಪ್ ಪ್ರಾಸ್ತಾವಿಕವಾಗಿ‌ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಮಾಜಿ ಎಂಎಲ್ಸಿ ಎಸ್.ಜಿ.ಮೇದಪ್ಪ, ಎಸ್.ಸಿ ಘಟಕದ ವಿವಿಧ ಪ್ರಮುಖರಾದ ಪರಮಾನಂದ್, ದಿವಾಕರಬಾಬು, ಮಹೇಶ್, ಸೋಮವಾರಪೇಟೆ ಮಂಡಲ‌ ಅಧ್ಯಕ್ಷ ಮನುಕುಮಾರ್ ರೈ, ಮಂಡಲ ಎಸ್.ಸಿ.ಮೋರ್ಚಾ ಅಧ್ಯಕ್ಷ ರಾಮಕೃಷ್ಣ, ಕುಶಾಲನಗರ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್, ಪ್ರಮುಖರಾದ ಕುಮಾರಪ್ಪ, ಎಚ್.ಎಂ.ರವಿ, ಎಚ್.ಕೆ.ಮಾದಪ್ಪ, ಪಿ.ಕೆ.ಚಂದ್ರು, ಎಸ್.ಸಿ.ಸತೀಶ್, ದುಶ್ಯಂತ್, ಪ್ರವೀಣ್, ಸುಶೀಲಾ, ಜ್ಯೋತಿ, ಮಂಜುಳಾ ಮತ್ತಿತರ ಪ್ರಮುಖರು ಇದ್ದರು.
ಇದೇ ಸಂದರ್ಭ 70 ಕ್ಕೂ ಅಧಿಕ ಚುನಾಯಿತ ಎಸ್.ಸಿ. ಜನಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರ‌ಮಕ್ಕೂ ಮುನ್ನ ಕುಶಾಲನಗರ ಗಣಪತಿ ದೇವಾಲಯದಿಂದ ಸಭಾಂಗಣದವರೆಗೆ ಮೆರವಣಿಗೆ ನಡೆಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!