ಹೊಸದಿಗಂತ ವರದಿ, ಗೋಕರ್ಣ:
ಪ್ರವಾಸಿಗರಿಗೆ ಮಾರಾಟ ಮಾಡುವ ಉದ್ದೇಶದಿಂದ ಮಾದಕ ದ್ರವ್ಯ ಚರಸ್ ಸಾಗಿಸುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 10 ಲಕ್ಷ ರೂಪಾಯಿ ಭಾರೀ ಮೌಲ್ಯದ ಚರಸ್ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ಗೋಕರ್ಣ ಬೇಲೆಹಿತ್ಲ ನಿವಾಸಿ ತುಳಸು ಹಮ್ಮು ಗೌಡ, ಮೂಲೇಕೆರಿ ನಿವಾಸಿ ಶ್ರೀಧರ ಗೌಡ ಮತ್ತು ಕುಡ್ಲೇ ಬೀಚ್ ನಿವಾಸಿ ನೇಪಾಳ ಮೂಲದ ಸಂತ ಬಹದ್ದೂರ್ ಥಮಂಗ್ ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ 1 ಕೆ.ಜಿ 648 ಗ್ರಾಂ ಚರಸ್ ದ್ವಿಚಕ್ರ ವಾಹನ, ಎರಡು ಮೊಬೈಲ್ ಪೋನ್ ಮತ್ತು ಡಿಜಿಟಲ್ ತಕ್ಕಡಿ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿ ತುಳಸು ಗೌಡ ಈ ಹಿಂದೆ ಮೂರು ಪ್ರತ್ಯೇಕ ಗಾಂಜಾ ಸಾಗಾಟ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ಇತ್ತೀಚೆಗೆ ಗೋಕರ್ಣದಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚುತ್ತಿರುವ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣುವರ್ಧನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ.ಜಯಕುಮಾರ ಮಾರ್ಗದರ್ಶನದಲ್ಲಿ ಭಟ್ಕಳ ಡಿ.ವೈ.ಎಸ್. ಪಿ ಶ್ರೀಕಾಂತ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಗೋಕರ್ಣದ ಓಂ ಬೀಚ್ ರಸ್ತೆಯಲ್ಲಿ ದಾಳಿ ನಡೆಸಿದ ತಂಡ ಅಪಾರ ಪ್ರಮಾಣದ ಚರಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಡಿ.ವೈ ಎಸ್. ಪಿ ಶ್ರೀಕಾಂತ, ಗೋಕರ್ಣ ಪೊಲೀಸ್ ನಿರೀಕ್ಷಕ ಎಂ.ಮಂಜುನಾಥ, ಪಿ.ಎಸ್. ಐ ಗಳಾದ ಹರೀಶ, ಸಕ್ತಿವೇಲು ಎ. ಎಸ್. ಐ ಅರವಿಂದ ಶೆಟ್ಟಿ ಮತ್ತು ಸಿಬ್ಬಂದಿಗಳು ಕಂದಾಯ ಇಲಾಖೆ ಅಧಿಕಾರಿ ಸಂತೋಷ ಶೇಟ್, ಎಚ್. ಮಂಜಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇತ್ತೀಚಿನ ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಚರಸ್ ವಶಪಡಿಸಿಕೊಂಡ ಪ್ರಕರಣ ಇದಾಗಿದ್ದು ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣುವರ್ಧನ್ ಪ್ರಶಂಸೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲೂ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ದಾಳಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮಾದಕ ವಸ್ತು ಸಾಗಾಟ ಮತ್ತು ಮಾರಾಟದಂತ ಪ್ರಕರಣಗಳು ಗಮನಕ್ಕೆ ಬಂದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠರು ತಿಳಿಸಿದ್ದಾರೆ.