Saturday, April 1, 2023

Latest Posts

ತಮಿಳುನಾಡಿನ ಶಾಸ್ತ್ರೀಯ ನೃತ್ಯ ಶೈಲಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಇವರದ್ದು!

-ತ್ರಿವೇಣಿ ಗಂಗಾಧರಪ್ಪ 

ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ. ಇಲ್ಲಿ ಅನೇಕ ಕಲಾ ಪ್ರಕಾರಗಳು ಜನ್ಮತಾಳಿದ್ದಷ್ಟೇ ಅಲ್ಲದೆ, ತನ್ನ ಕಲಾ ಮೆರುಗನ್ನು ದೇಶ ವಿದೇಶಗಳವರೆಗೂ ಪಸರಿಸಿದೆ. ಅದರಲ್ಲಿ ನೃತ್ಯವೂ ಒಂದು. ಭರತನಾಟ್ಯ, ಕಥಕ್ಕಳಿ, ಕೂಚಿಪೂಡಿ, ಒಡಿಸ್ಸಿ, ಮೋಹಿನಿಯಾಟ್ಟಂ, ಕಥಕ್, ಮಣಿಪುರಿ, ಸತ್ರಿಯಾ ಹೀಗೆ ಹತ್ತಾರು ನೃತ್ಯ ಪ್ರಕಾರಗಳಿವೆ. ಅದರಲ್ಲಿ ಭರತನಾಟ್ಯವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ತಂಜೂರಿನ ಬಾಲಸರಸ್ವತಿಯವರಿಗೆ ಸಲ್ಲುತ್ತದೆ.

Tanjore Balasaraswati – The Great Indian Dancer Who Popularized...

ದಕ್ಷಿಣ ಭಾರತದ ರಾಜ್ಯ ತಮಿಳುನಾಡಿನಲ್ಲಿ ಹುಟ್ಟಿಕೊಂಡ ಶಾಸ್ತ್ರೀಯ ನೃತ್ಯ ಶೈಲಿಯು ಭಾರತದ ವಿವಿಧ ಭಾಗಗಳಲ್ಲಿ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ಪ್ರಸಿದ್ಧವಾಗಿದೆ. ಭರತನಾಟ್ಯವನ್ನು ಅಂತರರಾಷ್ಟ್ರೀಯ ರಂಗಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರಿಗೆ 1957ರಲ್ಲಿ ಪದ್ಮಭೂಷಣ, 1977ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು, ಇದು ಭಾರತ ಸರ್ಕಾರವು ನೀಡಿದ ಮೂರನೇ ಮತ್ತು ಎರಡನೆಯ ಅತ್ಯುನ್ನತ ನಾಗರಿಕ ಗೌರವವಾಗಿದೆ. ಜೊತೆಗೆ 1981 ರಲ್ಲಿ ಅವರಿಗೆ ಚೆನ್ನೈನ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯ ಸಂಗೀತ ಕಲಾಶಿಖಾಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

1918ರ ಮೇ 13ರಂದು ಮದ್ರಾಸಿನಲ್ಲಿ (ಈಗಿನ ಚೆನ್ನೈ) ವಿಭಿನ್ನ ಕಲಾ ಪ್ರಕಾರಗಳಲ್ಲಿ ಸಾಧನೆ ಮಾಡಿದ ಕುಟುಂಬದಲ್ಲಿ ಜನಿಸಿದ ಬಾಲಸರಸ್ವತಿ ಸಹಜವಾಗಿಯೇ ನೃತ್ಯದತ್ತ ಆಕರ್ಷಿತರಾದರು. ಏಳನೇ ವಯಸ್ಸಿನಲ್ಲಿ, ಅವರು ತಮ್ಮ ಚೊಚ್ಚಲ ಪ್ರದರ್ಶನವನ್ನು ಕಾಂಚೀಪುರಂನ ಅಮ್ಮನಾಕ್ಷಿ ದೇವಸ್ಥಾನದಲ್ಲಿ ಪ್ರದರ್ಶಿಸಿದರು. ಬಾಲಸರಸ್ವತಿಯವರು ಹಲವಾರು ವರ್ಷಗಳ ಹಿಂದೆ ತಂಜಾವೂರಿನ ಅರಸರ ಆಸ್ಥಾನದಲ್ಲಿದ್ದ ಹದಿನೆಂಟನೇ ಶತಮಾನದ ಮಧ್ಯಭಾಗದ ಪ್ರಸಿದ್ಧ ನರ್ತಕಿ ಟಿ ಪಾಪಮ್ಮಾಳ್ ಅವರ ವಂಶಾವಳಿಯನ್ನು ಗುರುತಿಸಬಲ್ಲ ಕಲಾವಿದರ ಕುಟುಂಬದಿಂದ ಬಂದವರು. ಹೀಗಾಗಿ ‘ತಂಜೂರು’ ಎಂಬ ಹೆಸರು ಬಂದಿದೆ.

ಆಕೆಯ ತಾಯಿ ಜಯಮಹಲ್ ಕೂಡ ಸುಪ್ರಸಿದ್ಧ ಗಾಯಕಿ, ಅವರ ಅಜ್ಜಿ ವೀಣಾ ಧನಮ್ಮಾಳ್ ವೀಣಾವಾದನದಲ್ಲಿ ಹೆಚ್ಚು ಸಾಧನೆ ಮಾಡಿದ ಪ್ರಸಿದ್ಧ ಕರ್ನಾಟಕ ಸಂಗೀತಗಾರರಾಗಿ ಹೆಸರು ಮಾಡಿದ್ದರು. ಇಷ್ಟೆಲ್ಲಾ ಹಿನ್ನೆಲೆ ಇದ್ದರೂ ಕೂಡ ಬಾಲಸರಸ್ವತಿಯವರ ಭರತನಾಟ್ಯ ನೃತ್ಯಗಾರ್ತಿಯಾಗುವ ಆಸೆಗೆ ದಾರಿಯುದ್ದಕ್ಕೂ ಮುಳ್ಳಿನ ಹಾಸಿಗೆ ಹರಡಿತ್ತು. ಈ ನಿರ್ಧಾರಕ್ಕೆ ಆಕೆಯ ಕುಟುಂಬದಿಂದ ಮಾತ್ರವಲ್ಲದೆ ಸಮಾಜದಿಂದಲೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಪೂರ್ಣ ಸಮಯದ ವೃತ್ತಿಯಾಗಿ ನೃತ್ಯವನ್ನು ಕೀಳಾಗಿ ನೋಡಲಾಯಿತು ಮತ್ತು ಆಕೆಯ ಕುಟುಂಬವು ದೇವದಾಸಿ ಸಮುದಾಯದೊಂದಿಗೆ ಸಂಪರ್ಕ ಹೊಂದಿದ್ದರಿಂದ, ಆಕೆಯ ನಿರ್ಧಾರವನ್ನು ವಿರೋಧಿಸಿತು.

ಆಕೆಯ ಸಾಮರ್ಥ್ಯವನ್ನು ಗುರುತಿಸಿದ ಅಜ್ಜಿ ವೀಣಾ ಅವರನ್ನು ಗುರು ಕಂದಪ್ಪ ಪಿಳ್ಳೈ ಅವರ ಮಾರ್ಗದರ್ಶನದಲ್ಲಿ ನೃತ್ಯ ತರಬೇತಿಗೆ ಸೇರಿಸಿದರು. ಚಿನ್ನಯ್ಯ ನಾಯ್ಡು ಮತ್ತು ಗೌರಿ ಅಮ್ಮಾಳ್ ಮಾರ್ಗದರ್ಶನದಲ್ಲಿ ಅಭಿನಯ ಕಲೆಯನ್ನು ಅರಿತರು. ಈ ಗುರುಗಳ ಆರೈಕೆಯಲ್ಲಿ ಪ್ರವರ್ಧಮಾನಕ್ಕೆ ಬಂದ ಬಾಲಸರಸ್ವತಿ ನರ್ತಕಿಯಾಗುವ ತನ್ನ ಕನಸನ್ನು ಮುಂದುವರಿಸಲು ಹಗಲು ರಾತ್ರಿ ಅಭ್ಯಾಸ ಮಾಡಿದಳು.

1934 ರಲ್ಲಿ ಆಲ್ ಬೆಂಗಾಲ್ ಮ್ಯೂಸಿಕ್ ಕಾನ್ಫರೆನ್ಸ್‌ನಲ್ಲಿ ಕಲ್ಕತ್ತಾದಲ್ಲಿ (ಈಗ ಕೋಲ್ಕತ್ತಾ) ಪ್ರದರ್ಶನ ನೀಡಲು ಆಹ್ವಾನಿಸಿದಾಗ, ಬಾಲಸರಸ್ವತಿ ಅವರು ತಮ್ಮ ಸ್ಥಳೀಯ ರಾಜ್ಯದ ಹೊರಗೆ ಪ್ರದರ್ಶನ ನೀಡಿದ ಮೊದಲ ಭರತನಾಟ್ಯ ನೃತ್ಯಗಾರ್ತಿಯಾದರು. ಪ್ರಸಿದ್ಧ ನೃತ್ಯಗಾರ(ಕೊರಿಯಾಗ್ರಾಫರ್) ಉದಯ್ ಶಂಕರ್ ಅವರು ಕಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿ ಅವರ ಪ್ರತಿಭೆಯನ್ನು ಪರಿಷ್ಕರಿಸಲು ಮಾರ್ಗದರ್ಶನ ನೀಡಿದರು. ಈ ಮೂಲಕ ಆಕೆಗೆ ವಿದೇಶದಲ್ಲೂ ಕಾರ್ಯಕ್ರಮ ನೀಡುವ ಅವಕಾಶ ಸಿಕ್ಕಿತು.

1961 ರಲ್ಲಿ ಅವರು ಟೋಕಿಯೊದಲ್ಲಿ ಈಸ್ಟ್-ವೆಸ್ಟ್ ಮ್ಯೂಸಿಕ್ ಎನ್‌ಕೌಂಟರ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ, ಮುಂದಿನ ವರ್ಷ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜಾಕೋಬ್ಸ್ ಪಿಲ್ಲೊ ಡ್ಯಾನ್ಸ್ ಫೆಸ್ಟಿವಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಈ ವೇಳೆ ಟೆಡ್ ಶಾನ್ ಮತ್ತು ರುತ್ ಸೇಂಟ್ ಡೆನಿಸ್‌ನಂತಹ ವಿಶ್ವಪ್ರಸಿದ್ಧ ನೃತ್ಯಗಾರರನ್ನು ಭೇಟಿಯಾದ ಹೆಮ್ಮೆ ಇವರಿಗಿತ್ತು.

 

9 ಫೆಬ್ರವರಿ 1984 ರಂದು ಬಾಲಸರಸ್ವತಿ ಹೆಜ್ಜೆ ಹಾಕುವುದನ್ನು ನಿಲ್ಲಿಸಿದರೂ ಕೂಡ ಅವರ ಪರಂಪರೆಯು ಜೀವಂತವಾಗಿದೆ. ಚೆನ್ನೈನಲ್ಲಿರುವ ಅವರ ಮನೆಯನ್ನು ‘ಬಾಲಸರಸ್ವತಿ ಇನ್‌ಸ್ಟಿಟ್ಯೂಟ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ ಆಗಿ ಪರಿವರ್ತಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!