July 23, 2026
Thursday, July 23, 2026
spot_img

128 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಹಬ್ಬ: ಅರ್ಹತಾ ಮಾನದಂಡ ಪ್ರಕಟಿಸಿದ ಐಸಿಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬರೋಬ್ಬರಿ 128 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅಧಿಕೃತವಾಗಿ ಮರಳುತ್ತಿದೆ. ಪಂದ್ಯಗಳನ್ನು ಟಿ20 ಸ್ವರೂಪದಲ್ಲಿ ಆಡಿಸಲಾಗುತ್ತಿದ್ದು, ಜುಲೈ 22 ರಿಂದ ಜುಲೈ 29 ರವರೆಗೆ ಕ್ರೀಡಾಕೂಟ ನಡೆಯಲಿದೆ. ಇದೀಗ ಐಸಿಸಿ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಜಂಟಿಯಾಗಿ ತಂಡಗಳ ಅರ್ಹತಾ ಮಾನದಂಡಗಳನ್ನು ಪ್ರಕಟಿಸಿವೆ.

ಟಾಪ್ 4 ತಂಡಗಳಿಗೆ ನೇರ ಪ್ರವೇಶ

ಮುಂಬರುವ ಒಲಿಂಪಿಕ್ಸ್‌ನಲ್ಲಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ತಲಾ 6 ತಂಡಗಳು ಮಾತ್ರ ಭಾಗವಹಿಸಲಿವೆ. ಡಿಸೆಂಬರ್ 31, 2026 ರ ಐಸಿಸಿ ಟಿ20 ಶ್ರೇಯಾಂಕದ ಆಧಾರದ ಮೇಲೆ ನಾಲ್ಕು ವಿಭಿನ್ನ ಖಂಡಗಳ ಅಗ್ರ 4 ತಂಡಗಳು ನೇರ ಅರ್ಹತೆ ಪಡೆಯಲಿವೆ. ಇದರಂತೆ ಏಷ್ಯಾದಿಂದ ಭಾರತ, ಆಫ್ರಿಕಾದಿಂದ ದಕ್ಷಿಣ ಆಫ್ರಿಕಾ, ಯುರೋಪ್‌ನಿಂದ ಗ್ರೇಟ್ ಬ್ರಿಟನ್ (ಇಂಗ್ಲೆಂಡ್) ಮತ್ತು ಓಷಿಯಾನಿಯಾದಿಂದ ಆಸ್ಟ್ರೇಲಿಯಾ ನೇರ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಆತಿಥೇಯ ಅಮೆರಿಕಾಗೆ ಬಿಗ್ ಷರತ್ತು!

ಆತಿಥೇಯ ರಾಷ್ಟ್ರವಾಗಿ ಯುನೈಟೆಡ್ ಸ್ಟೇಟ್ಸ್ (USA) ನೇರ ಪ್ರವೇಶ ಪಡೆಯಬಹುದು. ಆದರೆ, ಜೂನ್ 30 ರಿಂದ ಡಿಸೆಂಬರ್ 31, 2026ರ ಒಳಗೆ ಯುಎಸ್ ತಂಡಗಳು ಐಸಿಸಿ ಶ್ರೇಯಾಂಕದಲ್ಲಿ ಟಾಪ್ 15 ರೊಳಗೆ ಸ್ಥಾನ ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ವಿಫಲವಾದರೆ, ಆ ಸ್ಥಾನ ಮುಂದಿನ ಅತ್ಯುತ್ತಮ ತಂಡದ ಪಾಲಾಗಲಿದೆ.

6ನೇ ತಂಡಕ್ಕೆ ಗ್ಲೋಬಲ್ ಕ್ವಾಲಿಫೈಯರ್

ಇನ್ನುಳಿದ ಕೊನೆಯ ಅಂದರೆ 6ನೇ ಸ್ಥಾನಕ್ಕಾಗಿ 2027 ರಲ್ಲಿ ‘ಒಲಿಂಪಿಕ್ ಗ್ಲೋಬಲ್ ಅರ್ಹತಾ ಪಂದ್ಯಾವಳಿ’ ನಡೆಯಲಿದೆ. ಈಗಾಗಲೇ ಅರ್ಹತೆ ಪಡೆದ ಟಾಪ್ 4 ತಂಡಗಳನ್ನು ಹೊರತುಪಡಿಸಿ, ಉಳಿದ 8 ತಂಡಗಳು ಈ ಟೂರ್ನಿಯಲ್ಲಿ ಸೆಣಸಾಡಲಿವೆ. ಇದರಲ್ಲಿ ಗೆಲ್ಲುವ ತಂಡ ಆರನೇ ತಂಡವಾಗಿ ಒಲಿಂಪಿಕ್ಸ್ ಟಿಕೆಟ್ ಪಡೆಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !