ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ವಿರುದ್ಧ ಲಂಡನ್‌ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪುಣೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ವೀರ ಸಾವರ್ಕರ್ ಮೊಮ್ಮಗ ಸತ್ಯಕಿ ಸಾವರ್ಕರ್ ಈ ಮೊಕದ್ದಮೆಯನ್ನು ಹೂಡಿದ್ದಾರೆ.
ಸತ್ಯಕಿ ಸಾವರ್ಕರ್ ವಾದ
ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ವೇಳೆ ವೀರ ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ನ್ಯಾಯಾಲಯದಲ್ಲಿ ಮಹತ್ವದ ಹೇಳಿಕೆ ನೀಡಿದ್ದು, ಸಾವರ್ಕರ್ ಅವರ ಬಿಡುಗಡೆಗೆ ಕಾಂಗ್ರೆಸ್ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಅಮೃತಕಾಲ’ ವೆಬ್‌ಸೈಟ್ ಮಾಹಿತಿ ಉಲ್ಲೇಖಿಸಿ, 1911 ರಿಂದ ಅಂಡಮಾನ್ ಜೈಲಿನಲ್ಲಿದ್ದ ಸಾವರ್ಕರ್ 1937 ರಲ್ಲಿ ಬಿಡುಗಡೆಯಾಗಲು ರಾಷ್ಟ್ರೀಯ ಅಸೆಂಬ್ಲಿ ಮಾಡಿದ ಪ್ರಯತ್ನಗಳು ಕಾರಣವೇ ಹೊರತು ಕಾಂಗ್ರೆಸ್ ಅಲ್ಲ ಮತ್ತು ಆ ಸಭೆಯನ್ನು ಕಾಂಗ್ರೆಸ್ ನಡೆಸಿರಲಿಲ್ಲ ಎಂದು ನ್ಯಾಯಾಲಯವೇ ಹೇಳಿದೆ.
ಇದೇ ವೇಳೆ, 1923ರ ಕಾಕಿನಾಡ ಅಧಿವೇಶನದಲ್ಲಿ ಸಾವರ್ಕರ್ ಬಿಡುಗಡೆಗಾಗಿ ನಿರ್ಣಯ ಅಂಗೀಕರಿಸಿದ್ದ ಕಾಂಗ್ರೆಸ್, ಶಹೀದ್ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರುರನ್ನು ಗಲ್ಲಿಗೇರಿಸುವ ಮುನ್ನ ಅಂತಹ ನಿರ್ಣಯ ಅಥವಾ ಮಸೂದೆಯನ್ನು ಏಕೆ ತರಲಿಲ್ಲ ಎಂದು ಸತ್ಯಕಿ ಪ್ರಶ್ನಿಸಿದ್ದು, ಒಂದು ವೇಳೆ ಕಾಂಗ್ರೆಸ್ ಆ ನಿರ್ಣಯ ತಂದಿದ್ದರೆ ಅವರ ಗಲ್ಲು ಶಿಕ್ಷೆಯನ್ನು ತಪ್ಪಿಸಬಹುದಿತ್ತು ಎಂದು ತಿಳಿಸಿದ್ದಾರೆ. ಇನ್ನು ಕೋರ್ಟ್ ಕೇಳಿದ ಕ್ಷಮಾದಾನ ಅರ್ಜಿಯ ಕುರಿತು ತಮಗೆ ಮಾಹಿತಿ ಇಲ್ಲ ಎಂದು ಸತ್ಯಕಿ ಹೇಳಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜುಲೈ 7 ಕ್ಕೆ ಮುಂದೂಡಿದೆ.
ರಾಹುಲ್ ಗಾಂಧಿ ವಿರುದ್ಧದ ಆರೋಪಗಳೇನು?
ಮಾರ್ಚ್ 2023 ರಲ್ಲಿ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ವೀರ ಸಾವರ್ಕರ್ ತಮ್ಮ ಪುಸ್ತಕವೊಂದರಲ್ಲಿ, ತಾವು ಮತ್ತು ತಮ್ಮ 5-6 ಸ್ನೇಹಿತರು ಸೇರಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಥಳಿಸಿದೆವು ಮತ್ತು ಆ ದಿನ ತಮಗೆ ತುಂಬಾ ಸಂತೋಷವಾಯಿತು ಎಂದು ಬರೆದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ವೀರ ಸಾವರ್ಕರ್ ತಮ್ಮ ಜೀವನದಲ್ಲಿ ಅಥವಾ ಯಾವುದೇ ಪುಸ್ತಕದಲ್ಲೂ ಇಂತಹ ಘಟನೆಯನ್ನು ಬರೆದಿಲ್ಲ. ರಾಹುಲ್ ಗಾಂಧಿ ಸಾವರ್ಕರ್ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಉದ್ದೇಶಪೂರ್ವಕವಾಗಿ ಈ ಸುಳ್ಳು ಕಥೆಯನ್ನು ಸೃಷ್ಟಿಸಿದ್ದಾರೆ ಎಂದು ಸತ್ಯಕಿ ಸಾವರ್ಕರ್ ಆರೋಪಿಸಿದ್ದಾರೆ.
ಇದನ್ನೂ ಓದಿ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ನ್ಯಾಯಾಲಯವು ರಾಹುಲ್ ಗಾಂಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿಕೊಂಡು ಸಮನ್ಸ್ ಜಾರಿ ಮಾಡಿದೆ.



