September 30, 2026
Wednesday, September 30, 2026
spot_img

ಮುಂಗಾರು ಆರ್ಭಟಕ್ಕೆ ಮಹಾರಾಷ್ಟ್ರ, ಗುಜರಾತ್ ಅಸ್ತವ್ಯಸ್ತ: ಕರ್ನಾಟಕಕ್ಕೂ ಪ್ರವಾಹ ಭೀತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಾದ್ಯಂತ ಮುಂಗಾರು ಅಬ್ಬರ ಜೋರಾಗಿದ್ದು, ಮಹಾರಾಷ್ಟ್ರ, ಗುಜರಾತ್ ಹಾಗೂ ಅಸ್ಸಾಂನಲ್ಲಿ ಜಲಪ್ರಳಯದ ವಾತಾವರಣ ನಿರ್ಮಾಣವಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿಯೂ ವರುಣನ ಆರ್ಭಟಕ್ಕೆ ಜನರು ನಲುಗಿದ್ದಾರೆ.

ವಿವಿಧ ರಾಜ್ಯಗಳಲ್ಲಿ ವರುಣನ ಆರ್ಭಟ

ಮಹಾರಾಷ್ಟ್ರದ ನಾಸಿಕ್ ಮತ್ತು ಪಾಲ್ಘರ್ ಭಾಗಗಳಲ್ಲಿ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಯಿಂದಾಗಿ ದೈನಂದಿನ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಇತ್ತ ದಕ್ಷಿಣ ಗುಜರಾತ್‌ನ ವಲ್ಸಾದ್ ಜಿಲ್ಲೆಯ ಉಮರ್‌ಗಾಂವ್‌ನಲ್ಲಿ ಕೇವಲ ಒಂದು ದಿನದಲ್ಲಿ ಬರೊಬ್ಬರಿ 43 ಇಂಚು ಮಳೆ ಸುರಿದಿದ್ದು, ನೆರೆ ಪರಿಸ್ಥಿತಿ ಉಂಟಾಗಿದೆ.

ಅಸ್ಸಾಂನಲ್ಲಿ ಪ್ರವಾಹ ವಿಕೋಪ

ಅಸ್ಸಾಂನಲ್ಲಿ ನೆರೆ ಹಾವಳಿ ತೀವ್ರಗೊಂಡಿದ್ದು, ಸುಮಾರು 11 ಜಿಲ್ಲೆಗಳು ಜಲಾವೃತವಾಗಿವೆ. 6.53 ಲಕ್ಷಕ್ಕೂ ಹೆಚ್ಚು ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಒಂದು ದಿನದಲ್ಲಿ 10 ಜನರು ಮೃತಪಟ್ಟಿದ್ದು, ಒಟ್ಟು ಬಲಿಯಾದವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ಕರ್ನಾಟಕಕ್ಕೂ ತಟ್ಟಿದ ಮಳೆ ಬಿಸಿ

ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಿಂದ ರಾಜ್ಯಕ್ಕೆ ಸುಮಾರು 70 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಇದರಿಂದ ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹಿರಣ್ಯಕೇಶಿ ನದಿಗಳು ಮೈದುಂಬಿ ಹರಿಯುತ್ತಿವೆ. ಚಿಕ್ಕೋಡಿ ಉಪವಿಭಾಗದ 6 ತಗ್ಗಿನ ಸೇತುವೆಗಳು (ನಿಪ್ಪಾಣಿಯ 5 ಹಾಗೂ ಚಿಕ್ಕೋಡಿಯ 1) ನೀರಿನಲ್ಲಿ ಮುಳುಗಿವೆ.

ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗಿನಲ್ಲಿ ಮುಂದಿನ ದಿನಗಳಲ್ಲಿ ಭಾರಿ ಗಾಳಿ ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ.

Must Read