ಅಂಪೈರ್‌ ತೀರ್ಮಾನಕ್ಕೆ ಟೀಕೆ: ಗಿಲ್‌ಗೆ ಶಾಕ್ ಕೊಟ್ಟ ಐಸಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾ ಸೋಲು ಅನುಭವಿಸಿದೆ. ಇದರ ಮದ್ಯೆ ಟೀಂ ಇಂಡಿಯಾ ಹಾಗು ಆರಂಭಿಕ ಬ್ಯಾಟರ್‌ ಶುಭ್‌ಮನ್ ಗಿಲ್‌ಗೆ ಐಸಿಸಿ ದೊಡ್ಡ ಶಾಕ್ ನೀಡಿದೆ.

ಅಂಪೈರ್ ತೀರ್ಮಾನವನ್ನು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ್ದ ಶುಭ್‌ಮನ್ ಗಿಲ್ ಇದೀಗ ದೊಡ್ಡ ಬೆಲೆ ತೆತ್ತಿದ್ದಾರೆ.

ದಿ ಓವಲ್ ಮೈದಾನದಲ್ಲಿ ನಡೆದ ಟೆಸ್ಟ್ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗಾಗಿ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡದ ಎಲ್ಲಾ ಆಟಗಾರರಿಗೆ ಪಂದ್ಯದ ಸಂಭಾವನೆಯ 100% ದಂಡ ವಿಧಿಸಲಾಗಿದೆ. ಇನ್ನು ಭಾರತ ತಂಡದ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ (Shubman Gill), ಎರಡನೇ ಇನಿಂಗ್ಸ್‌ನಲ್ಲಿ ಥರ್ಡ್‌ ಅಂಪೈರ್ ನೀಡಿದ್ದ ತೀರ್ಪನ್ನು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ ತಪ್ಪಿಗಾಗಿ ಮ್ಯಾಚ್‌ ರೆಫ್ರಿ, ಆರಂಭಿಕ ಬ್ಯಾಟರ್‌ಗೆ 15% ದಂಡ ವಿಧಿಸಿದ್ದಾರೆ. ಹೀಗಾಗಿ ಶುಭ್‌ಮನ್ ಗಿಲ್‌ಗೆ ಪಂದ್ಯದ ಸಂಭಾವನೆ ಮೀರಿ ಒಟ್ಟಾರೆ 115% ದಂಡ ವಿಧಿಸಲಾಗಿದೆ.

ಭಾರತ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದು ಮುನ್ನುಗ್ಗುತ್ತಿದ್ದ ವೇಳೆ ಬೋಲೆಂಡ್‌ರ ಬೌಲಿಂಗ್‌ನಲ್ಲಿ ಆಫ್‌ಸ್ಟಂಪ್‌ನಿಂದ ಹೊರಹೋಗುತ್ತಿದ್ದ ಚೆಂಡು ಗಿಲ್‌ರ ಬ್ಯಾಟ್‌ಗೆ ತಾಗಿ ಸ್ಲಿಫ್ಸ್‌ನತ್ತ ಸಾಗಿತು. ಕ್ಯಾಮರೂನ್‌ ಗ್ರೀನ್‌ ತಮ್ಮ ಎಡಕ್ಕೆ ಜಿಗಿದು ಆಕರ್ಷಕ ಕ್ಯಾಚ್‌ ಹಿಡಿದರು. ಆದರೆ ಚೆಂಡು ನೆಲಕ್ಕೆ ತಾಗಿದೆಯೇ ಎನ್ನುವ ಅನುಮಾನ ಪರಿಹರಿಸಿಕೊಳ್ಳಲು 3ನೇ ಅಂಪೈರ್‌ನ ನೆರವು ಪಡೆಯಲಾಯಿತು. 3ನೇ ಅಂಪೈರ್‌ ಹಲವು ಬಾರಿ ದೃಶ್ಯಗಳನ್ನು ಪರಿಶೀಲಿಸಿ, ಐಸಿಸಿಯ(ICC) ನಿಯಮವನ್ನು ಗಮನದಲ್ಲಿಟ್ಟುಕೊಂಡು ಔಟ್‌ ಎಂದು ತೀರ್ಪಿತ್ತರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಇನ್ನು ನಾಲ್ಕನೇ ದಿನದಾಟ ಮುಕ್ತಾಯದ ಬಳಿಕ ಶುಭ್‌ಮನ್ ಗಿಲ್, ಈ ವಿವಾದಾತ್ಮಕ ಔಟ್ ಫೋಟೋ ಜತೆಗೆ ಥರ್ಡ್ ಅಂಪೈರ್ ತೀರ್ಮಾನವನ್ನು ಪ್ರಶ್ನಿಸುವ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಐಸಿಸಿ, ಶುಭ್‌ಮನ್ ಗಿಲ್ ಅವರು ಐಸಿಸಿ ನೀತಿಸಂಹಿತೆಯ ಆರ್ಟಿಕಲ್ 2.7ನ್ನು ಉಲ್ಲಂಘಿಸಿದ್ದಾರೆ ಎಂದು ವಿವರಿಸಿದೆ. ಆರ್ಟಿಕಲ್ 2.7 ಪ್ರಕಾರ ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಡೆದ ಪ್ರಕರಣವನ್ನು ಸಾರ್ವಜನಿಕವಾಗಿ ಟೀಕಿಸುವುದು ಅಥವಾ ಅಸಂಬದ್ದವಾಗಿ ಕಾಮೆಂಟ್ ಮಾಡುವುದಾಗಿದೆ ಎಂದು ತಿಳಿಸಿದೆ. ಟಿವಿ ಅಂಪೈರ್ ರಿಚರ್ಡ್ ಕೆಟ್ಟೆಲ್‌ಬರ್ಗ್‌, ಕ್ಯಾಮರೋನ್ ಗ್ರೀನ್ ಹಿಡಿದ ಕ್ಯಾಚ್‌ ಕ್ರಮಬದ್ದವಾಗಿದೆ ಎಂದು ತೀರ್ಪಿತ್ತಿದ್ದರು. ಅದೇ ದಿನ ಶುಭ್‌ಮನ್ ಗಿಲ್ ಅಂಪೈರ್ ತೀರ್ಮಾನವನ್ನು ಪ್ರಶ್ನಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಹೀಗಾಗಿ ಅವರಿಗೆ ಪಂದ್ಯದ ಸಂಭಾವನೆಯ 15% ದಂಡ ವಿಧಿಸಲಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!