ರಾಸಾಯನಿಕದಿಂದ ಬೆಳೆ ನಾಶ: ಗೊಬ್ಬರ ತಯಾರಿಕಾ ಘಟಕಕ್ಕೆ ಗ್ರಾಮಸ್ಥರಿಂದ ಮುತ್ತಿಗೆ

ಹೊಸದಿಗಂತ ವರದಿ,ಮಂಡ್ಯ :

ತಾಲೂಕಿನ ಬಸರಾಳು ಹೋಬಳಿ ಕಾರೇಕಟ್ಟೆ ಗ್ರಾಮದಲ್ಲಿ ಗೊಬ್ಬರ ತಯಾರಿಕೆಗೆ ಅನುಮತಿ ಪಡೆದು, ರಾಸಾಯನಿಕ ತಯಾರಿಕಾ ಘಟಕ ಪ್ರಾರಂಭಿಸಲಾಗಿದೆ. ಇದರಿಂದಾಗಿ ಸುತ್ತಮುತ್ತಲ ಜಮೀನುಗಳಿಗೆ ರಾಸಾಯನಿಕ ಮಿಶ್ರಿತ ನೀರು ಹರಿದು ಬೆಳೆ ಸೇರಿದಂತೆ ಎಲ್ಲವೂ ವಿಷಯವಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಕೀರ್ತಿ ಎಂಬ ರಾಸಾಯನಿಕ ಘಟಕವನ್ನು ಪ್ರಾರಂಭಿಸಿರುವ ಕಾರಣ ವಿಷಾನಿಲ ಸೋರಿಕೆ, ರಾಸಾಯನಿಕ ಮಿಶ್ರಿತ ನೀರು ಭೂಮಿಗೆ ಸೇರ್ಪಡೆಯಾಗುತ್ತಿರುವ ಕಾರಣ ಅಂತರ್ಜಲ ಕಲುಷಿತವಾಗುತ್ತಿದೆ. ಬೆಳೆ ನಾಶವಾಗುತ್ತಿದೆ ಎಂದು ಆರೋಪಿಸಿದರು.
ರೈತರು ಮತ್ತು ಸುತ್ತಮುತ್ತಲ ಗ್ರಾಮಸ್ಥರಿಗೂ ಆರೋಗ್ಯ ಸಮಸ್ಯೆ ಎದುರಾಗಿದೆ. ಜಾನುವಾರುಗಳಿಗೂ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕೂಡಲೇ ಕಾರ್ಖಾನೆಗೆ ಬೀಗ ಹಾಕಿ ಸೀಲ್ ಮಾಡಬೇಕು ಎಂದು ಗ್ರಾಮಸ್ಥರು ಕಾರ್ಖಾನೆಗೆ ಮುತ್ತಿಗೆ ಹಾಕಿ ಅಕ್ರೋಶ ವ್ಯಕ್ತಪಡಿಸಿದರು.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ತೋಟಗಾರಿಕೆ, ಕೃಷಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತೆಂಗು, ಮಾವು, ರಾಗಿ ಇತರೆ ಬೆಳೆಗಳು ರಾಸಾಯನಿಕದಿಂದಾಗಿ ಸುಟ್ಟುಹೋಗಿವೆ. ಇದನ್ನು ಗಮನಿಸಿದ ಅಧಿಕಾರಿಗಳು ಎಲ್ಲ ಬೆಳೆಗಳ ಮಾದರಿಗಳನ್ನು ಸಂಗ್ರಹಿಸಿ, ಛಾಯಾಚಿತ್ರಗಳನ್ನು ತೆಗೆದುಕೊಂಡು ಜಿಲ್ಲಾಧಿಕಾರಿಗೆ ಈ ಬಗ್ಗೆ ವರದಿ ನೀಡಲಾಗುವುದು. ಅಲ್ಲಿಯವರೆವಿಗೂ ಗ್ರಾಮಸ್ಥರು ಶಾಂತಿಯಿಂದ ಇರಬೇಕು ಎಂದು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!