June 19, 2026
Friday, June 19, 2026
spot_img

ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಪತ್ತೆಯಾಯ್ತು ಕೂಡಲಿ ಮಠಕ್ಕೆ ಸೇರಿದ ಕಳವಾದ ಕೋಟ್ಯಾಂತರ ರೂ. ಸೊತ್ತು!

ಹೊಸದಿಗಂತ ವರದಿ ಶಿವಮೊಗ್ಗ:

ಬುಧವಾರ ಕಳುವಾಗಿದ್ದ ಕೂಡಲಿ ಆರ್ಯ ಅಕ್ಷೋಭ್ಯ ತೀರ್ಥ ಮಹಾ ಸಂಸ್ಥಾನಕ್ಕೆ ಸೇರಿದ್ದ ಬಂಗಾರದ ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂಪಾಯಿಯ ಮಾಲನ್ನು ಆರೋಪಿಯಿಂದ ವಶಕ್ಕೆ ಪಡೆದಿದ್ದಾರೆ.

ಮಹಿಷಿಯ ಶ್ರೀ ಸತ್ಯಸಂಧ ತೀರ್ಥರ ಮೂಲ ಬೃಂದಾವನ ಸನ್ನಿಧಾನದಲ್ಲಿ ಕಳೆದ ಸೋಮವಾರದಿಂದ ಆರಾಧನಾ ಮಹೋತ್ಸವ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೂಡಲಿ ಅಕ್ಷೋಭ್ಯ ತೀರ್ಥ ಮಠದ ಶ್ರೀ ರಘುವಿಜಯ ತೀರ್ಥ ಶ್ರೀಪಾದಂಗಳವರು ಭಾಗವಹಿಸಿ ಎಲ್ಲ ಧಾಮಿಕ ಕಲಾಪ ಮತ್ತು ಸಂಸ್ಥಾನ ಪೂಜೆ ನೆರವೇರಿಸಿದ್ದರು. ಈ ವೇಳೆ ಬುಧವಾರದಂದು ಸಂಸ್ಥಾನ ಪೂಜೆಯ ನಂತರ ಶ್ರೀಮಠಕ್ಕೆ ಸೇರಿದ್ದ 16 ಬಂಗಾರದ ಹಲಗಾರತಿಗಳು ನಾಪತ್ತೆಯಾಗಿದ್ದವು.

ಸುಮಾರು 750 ಗ್ರಾಂಗೂ ಅಧಿಕ ತೂಕದ ಹಲಗಾರತಿಗಳ ಬೆಲೆ 1 ಕೋಟಿ ಮೌಲ್ಯವನ್ನು ದಾಟಿತ್ತು. ನೂರಾರು ಭಕ್ತರು ನೆರೆದಿದ್ದ ಈ ಸಂದರ್ಭದಲ್ಲಿ ಇಂತಹ ಘಟನೆ ನಡೆದಿದ್ದು ಭಕ್ತರಲ್ಲೂ ತೀವ್ರ ಬೇಸರ ಉಂಟು ಮಾಡಿತ್ತು. ಮಠದ ದಿವಾನರ ದೂರಿನ ಮೇರೆಗೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಮಾಳೂರು ಪೊಲೀಸರು ತೀವ್ರ ತಪಾಸಣೆ ನಡೆಸಿದರು.

ಇದನ್ನೂ ಓದಿ:

ನಾಕಾಬಂಧಿ ಹಾಕಿ ನೆರೆದಿದ್ದ ಭಕ್ತರನ್ನೂ ತಪಾಸಣೆಗೊಳಪಡಿಸಿ ಹೊರಗೆ ಬಿಡಲಾಯಿತು. ಸ್ಥಳಕ್ಕೆ ಆಗಮಿಸಿದ ಎಎಸ್‌ಪಿ ಕಾರಿಯಪ್ಪ ಖುದ್ದಾಗಿ ಶ್ರೀಮಠದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದರು. ನಂತರ ಅನುಮಾಸ್ಪದವಾಗಿ ಕಂಡುಬಂದ ವ್ಯಕ್ತಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು.

ಭಾರತೀಯ ನ್ಯಾಯ ಸಂಹಿತೆ 306ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದರು. ಈ ವೇಳೆ ಪೊಲೀಸ್ ವಶದಲ್ಲಿದ್ದ ರಾಘವೇಂದ್ರ ಬಲ್ಲಾಳ್ ಎಂಬ ಆರೋಪಿ ತುಂಗಾ ನದಿಯ ದಡದಲ್ಲಿ ಶ್ರೀಮಠಕ್ಕೆ ಸೇರಿದ್ದ 16 ಬಂಗಾರದ ಹಲಗಾರತಿಗಳನ್ನು ಮುಚ್ಚಿಟ್ಟಿರುವುದಾಗಿ ತಿಳಿಸಿದ್ದಾನೆ.

ನಂತರ ಪೊಲೀಸರು ಅರೋಪಿಯನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಬಂಗಾರದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ತೀರ್ಥಹಳ್ಳಿಯ ನ್ಯಾಯಾಲಯಕ್ಕೆ ಆರೋಪಿ ರಾಘವೇಂದ್ರ ಬಲ್ಲಾಳ್‌ನನ್ನು ಮಾಳೂರು ಪೊಲೀಸರು ಹಾಜರುಪಡಿಸಿದರು. ಆರೋಪಿನ್ನು ನ್ಯಾಯಾಂಗ ಬಂಧನ‌ ವಿಧಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !