July 30, 2026
Thursday, July 30, 2026
spot_img

ಗದಗ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಶೌಚಾಲಯದಲ್ಲಿ 9.56 ಲಕ್ಷ ರೂ. ಮೌಲ್ಯದ ಗಾಂಜಾ ಪತ್ತೆ

ಹೊಸದಿಗಂತ ವರದಿ ಗದಗ:

ಗೋವಾಕ್ಕೆ ಹೊರಟಿದ್ದ ಶಾಲಿಮಾರ-ವಾಸ್ಕೋ ಎಕ್ಸಪ್ರೆಸ್‌ ರೈಲಿನಲ್ಲಿ ಅಪಾರ ಪ್ರಮಾಣದಲ್ಲಿ ಗಾಂಜಾ ಪತ್ತೆಯಾಗಿದ್ದು, ನಗರದ ರೈಲ್ವೆ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.ಬುಧವಾರ ಬೆಳಿಗ್ಗೆ 8.06ರ ಸುಮಾರಿಗೆ ಶಾಲಿಮಾರದಿಂದ ವಾಸ್ಕೋಗೆ ತೆರಳುತ್ತಿದ್ದ ಶಾಲಿಮಾರ-ವಾಸ್ಕೋ ಎಕ್ಸಪ್ರೆಸ್‌ ರೈಲಿನ ಇಂಜಿನ್ ಹಿಂಭಾಗದ ಜನರಲ್‌ ಕೋಚ್‌ನ ಶೌಚಾಲಯದ ಬಳಿ 9.56 ಲಕ್ಷ ರೂ. 19.300 ಕೆಜಿ ಗಾಂಜಾ ಪತ್ತೆಯಾಗಿದೆ.

ನಗರದ ರೈಲ್ವೆ ಪೊಲೀಸ್ ಠಾಣೆ ಪೊಲೀಸರು ಎಂದಿನಂತೆ ಮಾದಕ ವಸ್ತು ಪತ್ತೆ ಹಾಗೂ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಎರಡು ಬಿಳಿ ಬಣ್ಣದ ಚೀಲಗಳು ಪತ್ತೆಯಾಗಿವೆ. ಚೀಲಗಳು ಯಾರದ್ದು ಎಂದು ಪ್ರಯಾಣಿಕರನ್ನು ವಿಚಾರಿಸಿದಾಗ ಯಾರೂ ಸ್ಪಂದಿಸದಿದ್ದಾಗ ಅನುಮಾನಗೊಂಡ ಪೊಲೀಸರು ಎರಡೂ ಚೀಲಗಳನ್ನು ರೈಲಿನಿಂದ ಕೆಳಗಿಳಿಸಿದ ಪರಿಶೀಲಿಸಿದಾಗ ಗಾಂಜಾ ಇರುವುದು ಪತ್ತೆಯಾಗಿದೆ.
ಎರಡು ಬಿಳಿ ಬಣ್ಣದ ಚೀಲದ ಪೈಕಿ ಒಂದರಲ್ಲಿ 5.64 ಲಕ್ಷ ರೂ. ಮೌಲ್ಯದ 11.700 ಕೆಜಿ ಗಾಂಜಾ, ಮತ್ತೊಂದರಲ್ಲಿ 3.62 ಲಕ್ಷ ರೂ. ಮೌಲ್ಯದ 7.600 ಕೆಜಿ ಗಾಂಜಾ ಸೇರಿ ಒಟ್ಟು 9.56 ಲಕ್ಷ ರೂ. ಮೌಲ್ಯದ 19.300 ಕೆಜಿ ಗಾಂಜಾ ಪತ್ತೆಯಾಗಿದೆ.

ಆದರೆ, ಗಾಂಜಾ ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು, ಯಾರು ಸಾಗಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಗದಗ ರೈಲ್ವೆ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ತನಿಖಾಧಿಕಾರಿ ಬಿ.ಎನ್. ರಾಮನಗೌಡ್ರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !