ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಡೆಯಲಿರುವ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಏರಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಈಗಾಗಲೇ ಕರ್ನಾಟ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ ಹಾಗೂ ಇತರ ಹಾಲು ಒಕ್ಕೂಟಗಳು ದರ ಏರಿಕೆಗೆ ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಲಿನ ದರ ಹೆಚ್ಚಳ ಮಾಡುವ ಸಾಧ್ಯತೆಗಳಿವೆ.
ಹಾಲಿನ ದರ ಏರಿಕೆ ಆದಲ್ಲಿ ದರ ಪರಿಷ್ಕರಣೆ ಮಾಡಲು ನಮಗೂ ಅವಕಾಶ ನೀಡಿ ಎಂದು ಹೊಟೇಲ್ ಅಸೋಸಿಯೇಷನ್ ಸರ್ಕಾರಕ್ಕೆ ಪತ್ರ ಬರೆದಿದೆ. ಹಾಲಿನ ಉತ್ಪಾದನಾ ವೆಚ್ಚ, ಪಶು ಹಾಗೂ ನಿರ್ವಹಣ ವೆಚ್ಚ ಹೆಚ್ಚಳವಾಗಿರುವ ಕಾರಣ ಪ್ರತೀ ಲೀಟರ್ಗೆ ಎಂಟರಿಂದ ಹತ್ತು ರೂಪಾಯಿ ದರ ಏರಿಕೆ ಮಾಡಬೇಕು ಎಂದು ಪಟ್ಟು ಹಿಡಿದಿವೆ. ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ. ಪ್ರತೀ ಲೀಟರ್ಗೆ ನಾಲ್ಕರಿಂದ ಆರು ರೂಪಾಯಿ ಹೆಚ್ಚಳ ಮಾಡುವ ಚಿಂತನೆಯಲ್ಲಿ ಸರ್ಕಾರ ಇದೆ ಎಂದು ಹೇಳಲಾಗಿದೆ. ಸಭೆಯ ನಂತರ ಹಾಲಿನ ದರ ಎಷ್ಟು ಏರಿಕೆಯಾಗಿದೆ ಎನ್ನುವ ಮಾಹಿತಿ ತಿಳಿಯಲಿದೆ.
ಕಳೆದ ವರ್ಷ ಪ್ರತಿ ಲೀಟರ್ ಮೇಲೆ ನಾಲ್ಕು ರೂಪಾಯಿ ದರ ಹೆಚ್ಚಳ ಮಾಡಲಾಗಿತ್ತು. ರೈತರು ಮಳೆಯ ಸಮಸ್ಯೆ, ನಿರ್ವಹಣಾ ವೆಚ್ಚ, ಹಿಂಡಿ, ಬೂಸಾ ಬೆಲೆ ಏರಿಕೆ ಹಿನ್ನೆಲೆ ಮನವಿ ಮಾಡಿದ್ದು, ಹತ್ತು ರೂಪಾಯಿಯಲ್ಲಿ ರೈತನಿಗೆ ಏಳು ರೂಪಾಯಿ ನೀಡುವಂತೆ ಮನವಿ ಮಾಡಿದ್ದಾರೆ. ಉಳಿದ ಮೂರು ರೂಪಾಯಿ ಉತ್ಪಾದಕರ ಒಕ್ಕೂಟಕ್ಕೆ ನೀಡಬೇಕೆಂದು ಪ್ರಸ್ತಾವನೆ ನೀಡಲಾಗಿದೆ.



