ಕ್ರಿಪ್ಟೋ ಜೂಜಾಟವಿದ್ದಂತೆ- ಕಳವಳ ವ್ಯಕ್ತಪಡಿಸಿದ ಶಕ್ತಿಕಾಂತ್‌ ದಾಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯೀಗ ನೆಲಕಚ್ಚಿದೆ. ಬಹುತೇಕ ಕ್ರಿಪ್ಟೋ ಕರೆನ್ಸಿಗಳು ಮುಕ್ಕಾಲು ಭಾಗದಷ್ಟು ಮೌಲ್ಯ ಕಳೆದುಕೊಂಡು ಪಾತಾಳಕ್ಕೆ ಕುಸಿದು ತಿಂಗಳುಗಟ್ಟಲೇ ಕಳೆದಿದೆ. ಈ ನಡುವೆ ಕೆಲ ಕ್ರಿಪ್ಟೋ ಕಂಪನಿಗಳ ಹಗರಣಗಳು ಒಂದೊಂದಾಗಿ ಹೊರಬೀಳುತ್ತಿವೆ. ಆರಂಭದಲ್ಲಿ ಬಹಳ ಸದ್ದು ಮಾಡಿದ್ದ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದವರೆಲ್ಲ ಈಗ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಇದಿಗ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಈ ಕ್ರಿಪ್ಟೋ ಮಾರುಕಟ್ಟೆಯನ್ನು ಜೂಜಾಟವೆಂದು ಕರೆದಿದ್ದಾರೆ. ಅಲ್ಲದೇ ಇವು ದೇಶದ ಅರ್ಥವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ಶಕ್ತಿ ಹೊಂದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಶಕ್ತಿಕಾಂತ್‌ ದಾಸ್‌ ಈ ರೀತಿಯಾಗಿ ಕ್ರಿಪ್ಟೋ ಕುರಿತು ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಅವರು ಕ್ರಿಪ್ಟೋ ಕರೆನ್ಸಿಯ ಅಸ್ಥಿರತೆಯ ಕುರಿತು ಮಾತನಾಡಿದ್ದರು. ಕ್ರಿಪ್ಟೋವನ್ನು ನಿಷೇಧಿಸಬೇಕೆಂದೂ ಹೇಳಿದ್ದರು. ಇದೀಗ ಮತ್ತೊಮ್ಮೆ ಆ ಮಾತನ್ನು ಅವರು ಪುನರುಚ್ಚರಿಸಿದ್ದಾರೆ. ಅವರ ಮಾತಿನ ಸಾರವೇನೆಂದರೆ “ಯಾವುದೇ ಸ್ವತ್ತು ಅಥವಾ ಹಣಕಾಸಿನ ಉತ್ಪನ್ನವು ಅದರ ಆಧಾರವನ್ನು ಹೊಂದಿರಬೇಕು. ಆದರೆ ಕ್ರಿಪ್ಟೋ ವಿಷಯದಲ್ಲಿ ಆ ರೀತಿಯಾಗಿಲ್ಲ. ಕ್ರಿಪ್ಟೋಗೆ ಯಾವುದೇ ಆಧಾರವಿಲ್ಲ. ಅದು ಕೇವಲ ನಂಬಿಕೆಯನ್ನಾಧರಿಸಿದೆ. ಮಾರುಕಟ್ಟೆಯ ಬೆಲೆ ಹೆಚ್ಚಳವು ನಂಬಿಕೆಯನ್ನು ಹೆಚ್ಚುವಂತೆ ಮಾಡುತ್ತದೆ. ಅದು 100 ಪ್ರತಿಶತ ಊಹಾಪೋಹದ ಆಟ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅದೊಂದು ಜೂಜಾಟವಲ್ಲದೇ ಮತ್ತೇನೂ ಅಲ್ಲ.”

ಕ್ರಿಪ್ಟೋ ಕರೆನ್ಸಿಗಳು ಕಾನೂನುಬದ್ಧವಾಗಲಿವೆ ಎಂಬ ಊಹಾಪೋಹಗಳ ಮಧ್ಯೆ, ಆರ್‌ಬಿಐ ಗವರ್ನರ್‌ ಅವುಗಳನ್ನು ನಿಷೇಧಿಸುವ ಕುರಿತು ಮಾತನಾಡಿರುವುದು ದೇಶದಲ್ಲಿ ಕ್ರಿಪ್ಟೋ ಮಾರುಕಟ್ಟೆಯು ಇನ್ನಷ್ಟು ದುರ್ಬಲವಾಗಲು ಕಾರಣವಾಗಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!