ಏ.28ರಂದು‌ ಕೊಡಗಿನಲ್ಲಿ ʼಕಾರ್ನಿಕೊದ ಕಲ್ಲುರ್ಟಿʼ ಚಿತ್ರ ಪ್ರದರ್ಶನ

ಹೊಸದಿಗಂತ ವರದಿ, ಮಡಿಕೇರಿ
ಫಿನಿಕ್ಸ್ ಫಿಲಂಸ್ ಅರ್ಪಿಸುವ ಮೂಲ ಪಾಡ್ದನ ಆಧಾರಿತ ‘ಕಾರ್ನಿಕೊದ ಕಲ್ಲುರ್ಟಿ’ ತುಳು ಸಿನಿಮಾ ಏ.28ರ ಸಂಜೆ 6 ಗಂಟೆಗೆ ಮತ್ತು ರಾತ್ರಿ 9.15ಕ್ಕೆ ಸುಂಟಿಕೊಪ್ಪದ ಗಣೇಶ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರ ನಿರ್ಮಾಪಕ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಜನತೆ ಆರಾಧಿಸುವ ದೈವದ ಜೀವನ ಚರಿತ್ರೆಯಾಧರಿತ ಸಿನಿಮಾ ಇದಾಗಿದ್ದು, ಸುಮಾರು ರೂ.1.45 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ. ರಮೇಶ್ ಭಟ್ ಮುಖ್ಯ ಪಾತ್ರಧಾರಿಯಾಗಿ ನಟಿಸಿರುವ ಸಿನಿಮಾದಲ್ಲಿ 200ಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ. ಈಗಾಗಲೇ ಮಂಗಳೂರು, ಉಡುಪಿ, ಬೆಂಗಳೂರಿನಲ್ಲಿ ಚಿತ್ರ ಪ್ರದರ್ಶನಗೊಂಡಿದ್ದು, ಗುರುವಾರ ಕೊಡಗಿನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ. ರವಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪಾಷಾಣಮೂರ್ತಿ ಎಂದೇ ಪ್ರಚಲಿತದಲ್ಲಿರುವ ದೈವದ ಕುರಿತ ಸಿನಿಮಾ ಇದಾಗಿದೆ. ಕೊಡಗು ಜಿಲ್ಲೆಯಲ್ಲೂ ಬಹುತೇಕ ಮಂದಿ ಪಾಷಾಣಮೂರ್ತಿಯನ್ನು ಆರಾಧಿಸುತ್ತಿದ್ದು, ವರ್ಷಂಪ್ರತಿ ದೈವಕೋಲ ಕೂಡ ನಡೆಸಿಕೊಂಡು ಬರಲಾಗುತ್ತಿದೆ. ಸಿನಿಮಾದ ಮೂಲಕ ಭಕ್ತರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಎಲ್ಲರೂ ಸಿನಿಮಾ ವೀಕ್ಷಿಸುವಂತಾಗಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಬೇರೆ ಚಿತ್ರಮಂದಿರದಲ್ಲೂ ಪ್ರದರ್ಶನಕ್ಕೆ ಚಿಂತಿಸಲಾಗಿದೆ ಎಂದರು.
ಮಕ್ಕಂದೂರು ಕಾಫಿ ಲಿಂಕ್ಸ್ ಮಾಲಕರಾದ ಬಿ.ಎಂ. ರಮೇಶ್ ಮಾತನಾಡಿ, ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದಿದ್ದರೂ ದೈವ, ದೇವರು, ಗುರು ಹಿರಿಯರ ಆಶೀರ್ವದವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಅಂತಹ ದೈವದ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮಹೇಂದ್ರಕುಮಾರ್ ಚಲನಚಿತ್ರದ ಮೂಲಕ ವಿಭಿನ್ನ ಪ್ರಯತ್ನ ಮಾಡಿದ್ದು, ಸಾರ್ವಜನಿಕರು ಸಿನಿಮಾ ವೀಕ್ಷಿಸುವ ಮೂಲಕ ಸಹಕಾರ ನೀಡುವಂತಾಗಬೇಕು ಎಂದರು.
ಪ್ರಮುಖರಾದ ಜಗದೀಶ್ ಆಚಾರ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!