ಪುಸ್ತಕ ಮನುಷ್ಯನ ಸನ್ಮಾರ್ಗದ ದೀವಿಗೆ: ಕೇಶವ ಕಾಮತ್

ಹೊಸದಿಗಂತ ವರದಿ ಮಡಿಕೇರಿ:

ಒಳ್ಳೆಯ ಪುಸ್ತಕಗಳು ಮನುಷ್ಯನಿಗೆ ಸನ್ಮಾರ್ಗವನ್ನು ತೋರುವ ದೀವಿಗೆಗಳು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೇಶವ ಕಾಮತ್ ಹೇಳಿದರು. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸ್ಥಳೀಯ ಮಾರುಕಟ್ಟೆ ರಸ್ತೆಯ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳ ಮಕ್ಕಳಿಗೆ ಪುಸ್ತಕ ಹಾಗು ಲೇಖನಿ ಸಾಮಗ್ರಿಗಳನ್ನು ನೀಡುವ ಮೂಲಕ ಪುಸ್ತಕ ದಿನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರ ಕೈಯಲ್ಲೂ ಒಂದೊಂದು ಕನ್ನಡ ಪುಸ್ತಕವಿರಬೇಕು. ಮನೆಗಳಲ್ಲಿ ಉತ್ತಮ ಪುಸ್ತಕಗಳನ್ನು ಸಂಗ್ರಹಿಸುವ ಮೂಲಕ ಆತ್ಮೋನ್ನತಿ ಹೊಂದಬಹುದು ಎಂದು ಕರೆ ಕೊಟ್ಟರು. ಜಿಲ್ಲೆಯ ಐದು ತಾಲೂಕು ಘಟಕಗಳ ಪೈಕಿ ಕುಶಾಲನಗರ ತಾಲೂಕು ಘಟಕ ಹೆಚ್ಚು ಸಕ್ರಿಯವಾಗುವ ಮೂಲಕ ಸಾಹಿತ್ಯಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಇದೇ ಸಂದರ್ಭ ಜಿಲ್ಲಾಧ್ಯಕ್ಷ ಕಾಮತ್ ಶ್ಲಾಘಿಸಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಮಕ್ಕಳು ಎಳೆಯ ಪ್ರಾಯದಿಂದಲೇ ಓದುವ ಉತ್ತಮ ಹವ್ಯಾಸ ರೂಢಿಸಿಕೊಂಡು ಭವಿಷ್ಯದಲ್ಲಿ ಕವಿ, ಸಾಹಿತಿ, ಬರಹಗಾರರಾಗಬೇಕು. ಕನ್ನಡ ಭಾಷಾಭಿಮಾನವನ್ನು ಪ್ರತಿಯೊಬ್ಬರು ಮೆರೆಯುವ ಮೂಲಕ ಕನ್ನಡ ಭಾಷೆಯನ್ನು ಬಳಸಿ ಬೆಳೆಸಲು ಕರೆಕೊಟ್ಟರು.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಇಂದು ಮಕ್ಕಳ ಕೈಯಲ್ಲಿ ಪುಸ್ತಕಗಳ ಬದಲು ಮೊಬೈಲುಗಳು ರಿಂಗಣಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಇದರಿಂದಾಗಿ ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಮತ್ತು ಬರೆಯುವ ಹವ್ಯಾಸಗಳು ಮರೆಯಾಗುತ್ತಿವೆ ಎಂದು ವಿಷಾದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!