ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಗುರುವಾರ ಬಂಗಾಳಕೊಲ್ಲಿ ತೀರ ಪ್ರದೇಶಗಳಿಗೆ ʻದಾನಾʼ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಪೂರ್ವ– ಮಧ್ಯ ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಸಮುದ್ರದ ಉತ್ತರಕ್ಕೆ ವಾಯುಭಾರ ಕುಸಿತ ಉಂಟಾಗಿದೆ. ಇದು ಪಶ್ಚಿಮ– ವಾಯುವ್ಯ ದಿಕ್ಕಿನೆಡೆಗೆ ಚಲಿಸಿ ಬುಧವಾರದ ವೇಳೆಗೆ ಅಂದ್ರೆ ಅಕ್ಟೋಬರ್ 23ರ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಅಕ್ಟೋಬರ್ 24ರ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ಉತ್ತರ ಬಂಗಾಳ ಕೊಲ್ಲಿಯ ತೀರ ಪ್ರದೇಶಕ್ಕೆ ಅಪ್ಪಳಿಸಲಿದೆ. ವಾಯುವ್ಯ ದಿಕ್ಕಿಗೆ ಚಲಿಸಲಿರುವ ಈ ಚಂಡಮಾರುತ ಗುರುವಾರ (ಅ.24) ರಾತ್ರಿ ಅಥವಾ ಶುಕ್ರವಾರ (ಅ.25) ಮುಂಜಾನೆ ಒಡಿಶಾದ ಪುರಿಗೆ ಅಪ್ಪಳಿಸಲಿದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 100 ರಿಂದ 120 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಗುರುವಾರ ಮತ್ತು ಶುಕ್ರವಾರ ಭಾರೀ ಮಳೆಯಾಗಲಿದೆ. ಅಕ್ಟೋಬರ್ 23 ರಿಂದಲೇ ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಗಂಟೆಗೆ 90 ರಿಂದ 120 ಕಿಮಿ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಇದನ್ನು ತೀವ್ರ ಚಂಡಮಾರುತ ಎಂದು ವರ್ಗೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಮತ್ತು ಬಂಗಾಳದಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಸಿದೆ. ಹಲವೆಡೆ ಶಾಲಾ ಕಾಲೇಜುಗಳಿಗೆ ಸಂಪೂರ್ಣ ರಜೆ ಘೋಷಣೆ ಮಾಡಲಾಗಿದೆ.
ಬಂಗಾಳದಲ್ಲಿ ಸರ್ಕಾರಗಳು ಫುಲ್ ಅಲರ್ಟ್
ಎರಡೂ ರಾಜ್ಯಗಳು ಚಂಡಮಾರುತ ಎದುರಿಸಲು ನಾನಾ ಕ್ರಮಗಳನ್ನು ಕೈಗೊಂಡಿವೆ. ಈಗಾಗಲೇ ಕರಾವಳಿ ಪ್ರದೇಶಗಳಲ್ಲಿರುವ ಜನರನ್ನು ಸ್ಥಳಾಂತರಿಸಲು ಮುಂದಾಗಿವೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಿವೆ. ಗಂಜಾಂ, ಪುರಿ, ಜಗತ್‌ಸಿಂಗ್‌ಪುರ್, ಕೇಂದ್ರಪಾರ, ಭದ್ರಕ್, ಬಾಲಸೋರ್, ಮಯೂರ್‌ಭಂಜ್, ಕಿಯೋಂಜರ್, ಧೆಂಕನಲ್, ಜಾಜ್‌ಪುರ್, ಅಂಗುಲ್, ಖೋರ್ಧಾ, ನಯಾಗರ್ ಮತ್ತು ಕಟಕ್ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಗುರುವಾರ ಒಡಿಶಾದ ಪುರಿ, ಖುರ್ದಾ, ಗಂಜಾಂ ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷನೆ ಮಾಡಿದೆ. ಜೊತೆಗೆ ಪಶ್ಚಿಮ ಬಂಗಾಳದಲ್ಲೂ ಪುರ್ಬಾ ಮತ್ತು ಪಶ್ಚಿಮ ಮೇದಿನಿಪುರ್ ಮತ್ತು ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಬುಧವಾರ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ ಸ್ಥಳಾಂತರಗೊಂಡ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಪ್ರಮಾಣದ ದಾಸ್ತಾನು, ನೀರು ಇತ್ಯಾದಿ ಸೌಲಭ್ಯಗಳನ್ನು ಸೈಕ್ಲೋನ್ ಶೆಲ್ಟರ್‌ಗಳಲ್ಲಿ ಸಂಗ್ರಹಿಸಿಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದು, ಶೂನ್ಯ ಅಪಘಾತ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.
ʻದಾನಾʼ ಎಂದರೇನು?
ದಾನಾ ಎಂಬುದು ಅರೇಬಿಕ್ ಪದವಾಗಿದೆ. ದಾನಾ ಎಂದರೆ ಅಮೂಲ್ಯ ಮತ್ತು ಸುಂದರವಾದ ಮುತ್ತು ಎಂದು ಹೆಸರು. ಈ ಹೆಸರನ್ನು ಪರ್ಷಿಯನ್ ಮತ್ತು ಕೊಲ್ಲಿಯ ಅರಬ್ ರಾಷ್ಟ್ರಗಳಲ್ಲಿ ಬಳಸಲಾಗುತ್ತದೆ. ಅಲ್ಲಿ ಪರ್ಲ್ ಡೈವಿಂಗ್ (ಸಮುದ್ರದಾಳದಲ್ಲಿ ಮುತ್ತು ಹುಡುಕುವ ಕೆಲಸ) ಮಹತ್ವದ ವೃತ್ತಿಯಾಗಿದೆ. ಪರ್ಷಿಯನ್ ಭಾಷೆಯಲ್ಲಿ ʻದಾನಾʼ ಎಂದರೆ ದಾನಾ, ಅನುದಾನ, ಮುಂತಾದ ಅರ್ಥಗಳನ್ನು ಸೂಚಿಸುತ್ತದೆ. ಉಷ್ಣವಲಯದ ಚಂಡಮಾರುತಗಳಿಗೆ ಅಂತಾರಾಷ್ಟ್ರೀಯವಾಗಿ ಹೆಸರಿಸುವ ವ್ಯವಸ್ಥೆಯ ಭಾಗವಾಗಿ ಕತಾರ್ ಈ ಹೆಸರನ್ನಿಟ್ಟಿದೆ.