ಉದ್ಯಮಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ ಹೆದ್ದಾರಿ ಈ ವರ್ಷ 60 ಜನರನ್ನು ಅಪಘಾತದಲ್ಲಿ ಬಲಿ ಪಡೆದಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸೆ. 4ರಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟಾಟಾ ಗ್ರೂಪ್​ನ ಮಾಜಿ ಅಧ್ಯಕ್ಷ ಸೈರಸ್​ ಮಿಸ್ತ್ರಿ ಮೃತಪಟ್ಟಿದ್ದರು. ಅವರು ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಜಿಎಲ್‌ಸಿ 220ಡಿ 4 ಮ್ಯಾಟಿಕ್ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಮಿಸ್ತ್ರಿ ಜೀವವನ್ನು ಬಲಿಪಡೆದಿತ್ತು.
ಭಾರತದ ಪ್ರಮುಖ ಸಂಸ್ಥೆ ಟಾಟಾ ಸನ್ಸ್‌ ಸಮೂಹದ ನೇತೃತ್ವ ವಹಿಸಿದ ಬಳಿಕ ಸೈರಸ್‌ ಪಾಲೋನಜಿ ಮಿಸ್ತ್ರಿ ಅವರು ದೇಶದಾದ್ಯಂತ ಖ್ಯಾತಿ ಗಳಿಸಿದ್ದರು. ಅವರ ಅಪಘಾತದ ಸುದ್ದಿ ದೇಶದ ಉದ್ಯಮ ವಲಯದಲ್ಲಿ ದಿಗ್ಬ್ರಾಂತಿ ಮೂಡಿಸಿತ್ತು. ಮಿಸ್ತ್ರಿ ಪ್ರಯಾಣಿಸುತ್ತಿದ್ದ ಥಾಣೆಯ ಘೋಡ್‌ಬಂದರ್ ಮತ್ತು ಪಾಲ್ಘರ್ ಜಿಲ್ಲೆಯ ದಪ್ಚಾರಿ ನಡುವಿನ ಮುಂಬೈ-ಅಹಮದಾಬಾದ್ ಹೆದ್ದಾರಿಯ ಅಧಿಕೃತ ಅಂಕಿ ಅಂಶಗಳನ್ನು ಗಮನಿಸಿದರೆ ಅಘಾತಕಾರಿ ವಿಚಾರಗಳು ಬಯಲಾಗುತ್ತವೆ.
100 ಕಿಮೀ ವಿಸ್ತಾರದ ಈ ಹೆದ್ದಾರಿಯಲ್ಲಿ ಈ ವರ್ಷವೊಂದರಲ್ಲೇ 62 ಜನರು ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಈ ವರ್ಷ ಹೆದ್ದಾರಿಯಲ್ಲಿ 262 ಅಪಘಾತಗಳು ಸಂಭವಿಸಿದ್ದು, ಕನಿಷ್ಠ 62 ಮಂದಿ ಸಾವನ್ನಪ್ಪಿದ್ದಾರೆ ಮತ್ತು 192 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.
ಈ ಎಲ್ಲಾ ಘಟನೆಗಳಲ್ಲಿ ಹೆಚ್ಚಿನ ವೇಗ ಮತ್ತು ಚಾಲಕನ ತಪ್ಪು ನಿರ್ಧಾರಗಳು ಈ ಅನೇಕ ಘಟನೆಗಳಲ್ಲಿ ಪಾತ್ರವನ್ನು ವಹಿಸಿದೆಯಾದರೂ ರಸ್ತೆಯ ಕಳಪೆ ನಿರ್ವಹಣೆ, ಸರಿಯಾದ ಸೂಚನಾ ಫಲಕಗಳ ಕೊರತೆ ಮತ್ತು ವೇಗ ನಿಗ್ರಹ ಕ್ರಮಗಳ ಕೊರತೆಯು ಸಹ ಹೆಚ್ಚಿನ ಅಪಘಾತಗಳಿಗೆ ಕಾರಣವಾಗಿದೆ ಎಂಬುದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 4 ರಂದು ಮಿಸ್ತ್ರಿ ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಕಾರು ಅಪಘಾತಕ್ಕೀಡಾದ ಚರೋಟಿ ಸಮೀಪದ ಪ್ರದೇಶದಲ್ಲಿ ಈ ವರ್ಷದ ಆರಂಭದಿಂದ 25 ಗಂಭೀರ ಅಪಘಾತಗಳು ಸಂಭವಿಸಿದ್ದು, 26 ಸಾವುಗಳು ಸಂಭವಿಸಿವೆ ಎಂದು ಹೆದ್ದಾರಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಿಂಚೋಟಿ ಬಳಿ ಇದೇ ಅವಧಿಯಲ್ಲಿ 34 ಗಂಭೀರ ಅಪಘಾತಗಳಲ್ಲಿ 25 ಸಾವುಗಳು ವರದಿಯಾಗಿದ್ದು, ಮ್ಯಾನರ್ ಬಳಿ 10 ಅಪಘಾತಗಳಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಅಪಘಾತಗಳ ವಿಷಯದಲ್ಲಿ ಚರೋತಿ ಕಪ್ಪು ಚುಕ್ಕೆಯಾಗಿದೆ ಎಂದು ಅಧಿಕಾರಿ ಹೇಳುತ್ತಾರೆ.
ಮುಂಬೈ ಕಡೆಗೆ ಪ್ರಯಾಣಿಸುವಾಗ ಸೂರ್ಯ ನದಿ ಸೇತುವೆಯ ಮೊದಲು ರಸ್ತೆ ತಿರುವುಗಳು ಮತ್ತು ಮೂರು-ಪಥದ ಕ್ಯಾರೇಜ್‌ವೇ ದ್ವಿಪಥವಾಗಿ ಕಿರಿದಾಗುತ್ತ ಬರುತ್ತದೆ. ಆದರೆ ಸೇತುವೆಯನ್ನು ತಲುಪುವ ಮೊದಲು ವಾಹನ ಚಾಲಕರನ್ನು ಎಚ್ಚರಿಸುವ ಯಾವುದೇ ಪರಿಣಾಮಕಾರಿ ರಸ್ತೆ ಸಂಕೇತಗಳು ಅಥವಾ ವೇಗ ನಿಯಂತ್ರಣ ಸೂಚನೆಗಳು ಇಲ್ಲ. ಇದು ಹೆಚ್ಚಿನ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ರಸ್ತೆ ಕಾಂಗ್ರೆಸ್‌ನ ಸುರಕ್ಷತೆ-ಸಂಬಂಧಿತ ಮಾರ್ಗಸೂಚಿಗಳನ್ನು ರಸ್ತೆಯ ನಿರ್ವಹಣೆಯ ಜವಾಬ್ದಾರಿ ಹೊಂದಿರುವವರು ಕಡೆಗಣಿಸಿದಂತೆ ತೋರುತ್ತಿದೆ ಎಂದು ಇನ್ನೊಬ್ಬ ಅಧಿಕಾರಿ ಹೇಳುತ್ತಾರೆ.
ರಸ್ತೆ ಅಪಘಾತಗಳ ತಡೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಗತ್ಯ ಕ್ರಮಗಳನ್ನು ತರಲು ಉದ್ದೇಶಿಸಿರುವುದನ್ನು ಈ ಹಿನ್ನೆಲೆಯಲ್ಲಿ ಸ್ಮರಿಸಬಹುದು. ವಾಹನ ತಯಾರಕರು ಹಿಂಭಾಗದ ಸೀಟ್‌ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಯೋಜಿಸುತ್ತಿದೆ. ಇದಲ್ಲದೆ, ಸಾರಿಗೆ ಸಚಿವರು ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಎಲ್ಲಾ ಕಾರುಗಳಿಗೆ ಆರು ಏರ್‌ಬ್ಯಾಗ್‌ಗಳನ್ನು ಹೊಂದಲು ನಿಯಮಗಳನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ. ಇದು ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ದೇಶದಲ್ಲಿ ಸುರಕ್ಷತೆಯನ್ನು ಸುಧಾರಿಸುವ ಕ್ರಮಗಳ ಸರಣಿಯ ಭಾಗವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!